ಅಪ್ರಾಪ್ತರ ಆಸ್ತಿ ಮಾರಾಟ: ಮಕ್ಕಳ ಹಿತಾಸಕ್ತಿ ಮುಖ್ಯ- ಆದೇಶ ಎತ್ತಿ ಹಿಡಿದ ಹೈಕೋರ್ಟ್
ಅಪ್ರಾಪ್ತರ ಆಸ್ತಿ ಮಾರಾಟ: ಮಕ್ಕಳ ಹಿತಾಸಕ್ತಿ ಮುಖ್ಯ - ಆದೇಶ ಎತ್ತಿ ಹಿಡಿದ ಹೈಕೋರ್ಟ್
ಅಪ್ರಾಪ್ತ ಮಕ್ಕಳ ಹೆಸರಿಗೆ ವಿಲ್ ಮಾಡಲಾದ ಆಸ್ತಿ ಮಾರಾಟದ ಸಂದರ್ಭದಲ್ಲಿ ಮಕ್ಕಳ ಹಿತಾಸಕ್ತಿಯನ್ನು ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ವೀಲುನಾಮೆ ಮೂಲಕ ಅಪ್ರಾಪ್ತ ಮಕ್ಕಳ ಹೆಸರಿಗೆ ಬಂದಿರುವ ಆಸ್ತಿಯನ್ನು ಪೋಷಕರು ಮಾರಾಟ ಮಾಡಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಅರಾದೆ ಹಾಗೂ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣ ಏನು..?
ಲಿಂಗರಾಜಪುರದ ಮುನಿಸ್ವಾಮಪ್ಪ ರಸ್ತೆಯ 30x30 ಚದರ ಅಡಿ ವಿಸ್ತೀರ್ಣದ ಮನೆ ಹಾಗೂ ಸತ್ಯಮೂರ್ತಿ ರಸ್ತೆಯ 72x42 ಚದರ ಅಡಿ ವಿಸ್ತೀರ್ಣದ ಮನೆ ಲಕ್ಷಯ್ಯ ಎಂಬವರ ಮಾಲೀಕತ್ವದಲ್ಲಿ ಇತ್ತು. ಅವಿವಾಹಿತರಾಗಿದ್ದ ಅವರು 1994ರ ಸೆಪ್ಟಂಬರ್ 22ರಂದು ವಿಲ್ ಬರೆಸಿದ್ದರು.
ತಮ್ಮ ಸ್ಥಿರಾಸ್ತಿಗಳನ್ನು ತಮ್ಮ ಸಹೋದರನ ಮಗ ಮುನಿರಾಜು ಮಕ್ಕಳಾದ ಮಂಜು, ಶ್ರೀನಿವಾಸ್ ಹಾಗೂ ದೇವಿ ಹೆಸರಿಗೆ ಲಕ್ಷಯ್ಯ ವಿಲ್ ಮಾಡಿದ್ದರು. ಪ್ರೌಢಾವಸ್ಥೆಗೆ ತಲುಪಿದ ನಂತರ ಆಸ್ತಿಯ ಖಾತೆಯನ್ನು ಅವರ ಹೆಸರಿಗೆ ಬದಲಿಸಿಕೊಡಬೇಕು ಎಂದು ಷರತ್ತು ವಿಧಿಸಿದ್ದರು.
ಜೊತೆಗೆ ಆ ಆಸ್ತಿಗಳ ಮೇಲೆ ಮಂಜು, ಶ್ರೀನಿವಾಸ್ ಹಾಗೂ ದೇವಿ ಅವರಿಗೆ ಹುಟ್ಟಲಿರುವ ಮಕ್ಕಳಿಗೂ ಉತ್ತರಾಧಿಕಾರದ ಹಕ್ಕು ನೀಡುವುದಾಗಿ ಹೇಳಿದ್ದರು. ಇದೇ ವೇಳೆ, ತನ್ನ ಸಹೋದರ ಮುನಿರಾಜು ಅವರಿಗಾಗಲೀ ಅವಕ ಮೂವರು ಮಕ್ಕಳಿಗಾಗಲೀ ಆಸ್ತಿ ಮಾರಾಟದ ಹಕ್ಕು ಇರುವುದಿಲ್ಲ ಎಂದು ಷರತ್ತು ವಿಧಿಸಿದ್ದರು.
ಮುನಿರಾಜು ಮಗಳು ಮಂಜು ತಮ್ಮ ಪುತ್ರನೊಂದಿಗೆ ಮುನಿಸ್ವಾಮಪ್ಪ ರಸ್ತೆಯಲ್ಲಿ ಇರುವ ಮನೆಯಲ್ಲಿ ವಾಸಿಸುತ್ತಿದ್ದರೆ, ಮಕ್ಕಳಾದ ಶ್ರೀನಿವಾಸ್ ಮತ್ತು ದೇವಿ ತಮ್ಮ ಮಕ್ಕಳೊಂದಿಗೆ ಸತ್ಯಮೂರ್ತಿ ರಸ್ತೆಯಲ್ಲಿ ಇರುವ ಮನೆಯಲ್ಲಿ ವಾಸವಾಗಿದ್ದರು.
'ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಇಲ್ಲ'
ಲಕ್ಷಯ್ಯ ಮಾಡಿರುವ ವಿಲ್ ಗಮನಿಸಿದರೆ, ಆಸ್ತಿಗಳು ಮೊದಲಿಗೆ ಮುನಿರಾಜು ಅವರ ಮೂವರು ಮಕ್ಕಳಿಗೆ, ಆ ಬಳಿಕ ಅವರ ಮಕ್ಕಳಿಗೆ ಸೇರಲಿದೆ. ಅಂದರೆ, ಮಂಜು, ಶ್ರೀನಿವಾಸ್ ಮತ್ತು ದೇವಿ ಅವರಿಗೆ ಜನಿಸಲಿರುವ ಮಕ್ಕಳ ಪರವಾಗಿ ಮೊದಲೇ ವಿಲ್ ಮಾಡಲಾಗಿದೆ. ಹಾಗಾಗಿ, ಮುನಿರಾಜು ಅವರ ಮೂವರು ಮಕಮ್ಕಳೂ ಆಸ್ತಿಯ ಸಂಪೂರ್ಣ ಮಾಲೀಕರೆನಿಸಿಕೊಳ್ಳುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಕ್ಕಳ ಹಿತ ಪರಿಗಣಿಸಿ ಎಂದ ಹೈಕೋರ್ಟ್
ಅಪ್ರಾಪ್ತ ಮಕ್ಕಳ ಪಾಲಕರು ತಮ್ಮ ಆದಾಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಓರ್ವ ಬಾಲಕ ಎಂಟನೇ ತರಗತಿ ಓದುತ್ತಿದ್ದರೆ, ಮತ್ತೊಬ್ಬಾಕೆ ನರ್ಸರಿಯಲ್ಲಿ ಇದ್ದಾಳೆ. ಅವರ ಶಾಲೆಯ ಖರ್ಚು ಎಷ್ಟು? ವಿದ್ಯಾಭ್ಯಾಸಕ್ಕಾಗಿ ಎಷ್ಟು ಹಣದ ಅಗತ್ಯವಿದೆ? ಮಾರಾಟ ಮಾಡುವ ಆಸ್ತಿಯ ಮೌಲ್ಯ ಎಷ್ಟು? ಎಷ್ಟು ಮೊತ್ತಕ್ಕೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂಬ ಬಗ್ಗೆ ಅರ್ಜಿದಾರರು ಯಾವುದೇ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿಲ್ಲ.
ಮಕ್ಕಳ ವಿದ್ಯಾಭ್ಯಾಸ ಪಾಲಕರ, ಹೆತ್ತವರ ಹೊಣೆ. ಅವರು ಯಾವ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ತೋರಿಸುವ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ, ಮಕ್ಕಳ ಶಿಕ್ಷಣಕ್ಕಾಗಿ ಎರಡೂ ಸ್ಥಿರಾಸ್ತಿಗಳನ್ನು ಮಾರಾಟ ಮಾಡಬೇಕು ಎಂದು ಸಮರ್ಥಿಸುವ ಯಾವುದೇ ಅಂಶಗಳು ಲಭ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ನೀಡಿತು.