ಪರಿಶಿಷ್ಟರ ಭೂ ಪರಭಾರೆ: ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ- ಮಹತ್ವದ ಮಾಹಿತಿ
ಪರಿಶಿಷ್ಟರ ಭೂ ಪರಭಾರೆ: ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ- ಮಹತ್ವದ ಮಾಹಿತಿ
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆಗೆ ಕರ್ನಾಟಕ ವಿಧಾನಸಭೆ ಒಪ್ಪಿಗೆ ನೀಡಿದೆ.
1978ರಿಂದಲೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ ಕಾಯ್ದೆ ಜಾರಿಯಲ್ಲಿ ಇದೆ. ಆದರೆ, 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಈ ಬದಲಾವಣೆ ಮಾಡಲು ಕಾರಣವಾಯಿತು.
ತೀರ್ಪಿನಲ್ಲಿ ಕಾಯ್ದೆಯಡಿ ಅರ್ಜಿ ಸಲ್ಲಿಸುವುದಕ್ಕೆ ಕಾಲಮಿತಿ ಕುರಿತು ಸ್ಪಷ್ಟತೆ ಇಲ್ಲದ ಕಾರಣ ಗೊಂದಲವಿದೆ ಎಂದು ಹೇಳಿತ್ತು. ಈ ಆಧಾರದಲ್ಲೇ ಸದ್ರಿ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಇದನ್ನೇ ಆಧರಿಸಿದ ಬಹುತೇಕ ಪ್ರಕರಣಗಳನ್ನು ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶಿಷ್ಟರಿಗೆ ಅನ್ಯಾಯ ಆಗುತ್ತಿರುವುದನ್ನು ತಪ್ಪಿಸಲು SC ST PTCL ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಮಸೂದೆಯ ಪ್ರಮುಖ ಅಂಶಗಳು:
ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಕಾಯ್ದೆಯಡಿ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇರುವುದಿಲ್ಲ.
ಈ ಸಂಬಂಧ, ಮೊಕದ್ದಮೆಗಳನ್ನು ನ್ಯಾಯ ತೀರ್ಮಾನ ಮಾಡುವ ಎಲ್ಲ ಸಕ್ಷಮ ಪ್ರಾಧಿಕಾರಗಳು ಮತ್ತು ಎಲ್ಲ ನ್ಯಾಯಾಲಗಳಿಗೂ ಈ ತಿದ್ದುಪಡಿ ಅನ್ವಯ ಆಗಲಿದೆ.
ಪರಿಶಿಷ್ಟರ ಭೂಮಿ ಅಕ್ರಮ ಪರಭಾರೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವುದಕ್ಕೆ ಹಿಂದೆ ವಿಧಿಸಿದ್ದ ಕಾಲಮಿತಿಯನ್ನು ರದ್ದುಪಡಿಸಲಾಗಿದೆ.
ಈ ಹಿಂದೆ, ಪರಿಶಿಷ್ಟ ಸಮುದಾಯದವರಿಗೆ ಸರ್ಕಾರ ಮಂಜೂರು ಮಾಡಿದ ಜಮೀನನ್ನು ಅನುಮತಿ ಇಲ್ಲದೆ ಮಾರಾಟ ಮಾಡುವುದಕ್ಕೆ ಹಾಲಿ ಪಿಟಿಸಿಎಲ್ ಕಾಯ್ದೆಯಲ್ಲಿ ನಿರ್ಬಂಧ ಇತ್ತು. ಅದೇ ರೀತಿ, ಅಕ್ರಮ ಪರಭಾರೆ ಪ್ರಶ್ನಿಸಿ, ವಾರಿಸುದಾರರು ಅರ್ಜಿ ಸಲ್ಲಿಸುವುದಕ್ಕೆ ಪಿಟಿಸಿಎಲ್ ಕಾಯ್ದೆಯಲ್ಲಿ ಕಾಲಮಿತಿ ನಿಗದಿಪಡಿಸಿರಲಿಲ್ಲ.
ಕಾಲಮಿತಿ ನಿಗದಿಪಡಿಸದಿದ್ದರೆ ಅರ್ಜಿಗಳು ಮಾನ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗಾಗಿ ಕಾಯ್ದೆ ಬಲ ಕಳೆದುಕೊಂಡಿತ್ತು.
ಪರಿಶಿಷ್ಟರಿಗೆ ನ್ಯಾಯ ಒದಗಿಸುವುದಕ್ಕಾಗಿ ತಿದ್ದುಪಡಿ ಮಸೂದೆಯನ್ನು ಸಂಪುಟದ ಒಪ್ಪಿಗೆ ಪಡೆದು, ಸದನದಲ್ಲಿ ಮಂಡಿಸಲಾಗಿದೆ.