ಸರ್ವೇ ನಂಬರ್ ದೋಷ ಸರಿಪಡಿಸಲು ನ್ಯಾಯಮಂಡಳಿಗೆ ಅಧಿಕಾರ: ಕರ್ನಾಟಕ ಹೈಕೋರ್ಟ್ ತೀರ್ಪು
ಸರ್ವೇ ನಂಬರ್ ದೋಷ ಸರಿಪಡಿಸಲು ನ್ಯಾಯಮಂಡಳಿಗೆ ಅಧಿಕಾರ: ಕರ್ನಾಟಕ ಹೈಕೋರ್ಟ್ ತೀರ್ಪು
ಸರ್ವೇ ನಂಬರ್‌ನಲ್ಲಿ ದೋಷ ಇದ್ದರೆ ಅದನ್ನು ಕರ್ನಾಟಕ ಭೂಸುದಾರಣಾ ಕಾಯ್ದೆಯಡಿ ನ್ಯಾಯಮಂಡಳಿಯಿಂದ ಸರಿಪಡಿಸಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಮಂಗಳೂರಿನ ಕಂಕನಾಡಿ ನಿವಾಸಿ ಚಂದ್ರಾವತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾ. ಅಲೋಕ್ ಅರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರ:
ಚಂದ್ರಾವತಿ ಅವರ ತಾಯಿ ವೂವಮ್ಮ ಮತ್ತು ಚಂದ್ರಾವತಿ ಅವರ ಸಹೋದರ ಎಂ. ನಾಗೇಶ್ ಅವರು ಭೂಸುಧಾರಣಾ ಕಾಯ್ದೆ 1961ರಡಿ ಭೂಮಾಲಕತ್ವದ ಹಕ್ಕಿಗಾಗಿ ಫಾರ್ಮ್ ನಂ. 7ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ವೂವಮ್ಮ ಅವರಿಗೆ ಭೂ ಹಕ್ಕನ್ನು ನೀಡುವಾಗ ಸರ್ವೇ ನಂಬರ್ ನಮೂದಿಸುವಲ್ಲಿ ಭೂ ನ್ಯಾಯ ಮಂಡಳಿ ಲೋಪ ಮಾಡಿತ್ತು. ಎರಡು ಗ್ರಾಮಕ್ಕೆ ಸೇರಿದ ಸರ್ವೇ ನಂಬರ್‌ಗಳ ಜಮೀನಿನ ಹಕ್ಕುಗಳನ್ನು ವೂವಮ್ಮ ಅವರಿಗೆ ನೀಡಲಾಗಿತ್ತು.
ಅದನ್ನು ಸರಿಪಡಿಸಲು ವೂಮ್ಮ ಅವರ ವಾರಿಸುದಾರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಭೂ ಮಾಲೀಕರು ಆಕ್ಷೇಪಿಸಿದ್ದರು. 23-09-2011ರ ಆದೇಶದಲ್ಲಿ ಭೂ ನ್ಯಾಯಮಂಡಳಿಯು ಸರ್ವೇ ನಂಬರ್‌ನ್ನು ತಿದ್ದುಪಡಿಗೆ ಒಪ್ಪಿಗೆ ಸೂಚಿಸುವ ಮೂಲಕ ವಾರಿಸುದಾರರ ಅರ್ಜಿಯನ್ನು ಪುರಸ್ಕರಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಭೂಮಾಲೀಕರು ಹೈಕೋರ್ಟ್ ಮೊರೆ ಹೋಗಿ ರಿಟ್ ಅರ್ಜಿಯನ್ನು ದಾಖಲಿಸಿದ್ದರು. ಇದನ್ನು ಇತ್ಯರ್ಥಪಡಿಸಿದ ಏಕಸದಸ್ಯ ನ್ಯಾಯಪೀಠ ಭೂ ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ವೂವಮ್ಮ ಅವರ ಪುತ್ರಿ ಚಂದ್ರಾವತಿ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಭೂ ನ್ಯಾಯ ಮಂಡಳಿಯ ಆದೇಶದಲ್ಲಿ ಸರ್ವೇ ನಂಬರ್ ದೋಷ ಇದೆ. ಇದೊಂದು ಟೈಪಿಂಗ್ ದೋಷವಾಗಿದ್ದು, ಸಂಬಂಧಪಟ್ಟವರು ಅರ್ಜಿಯನ್ನು ಸಲ್ಲಿಸುವ ಮೂಲಕ ಈ ದೋಷವನ್ನು ಸರಿಪಡಿಸಬಹುದಾಗಿದೆ. ಇದಕ್ಕೆ ಭೂ ನ್ಯಾಯ ಮಂಡಳಿಗೆ ನ್ಯಾಯವ್ಯಾಪ್ತಿ ಇದ್ದು, ದೋಷವನ್ನು ಸರಿಪಡಿಸಬಹುದಾಗಿದೆ ಎಂದು ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮತ್ತು ಚಂದ್ರಾವತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.
ಪ್ರಕರಣ: ಚಂದ್ರಾವತಿ Vs ಎನ್. ಸುಬ್ಬನ್ ಶಿವರಾವ್ ಮತ್ತು ಇತರರು
ಕರ್ನಾಟಕ ಹೈಕೋರ್ಟ್, WA 915/2021 Dated 27-09-2022