ವಕೀಲರ ರಾಜ್ಯ ಸಮ್ಮೇಳನ: ಕಾರ್ಯಕ್ರಮದ ಸ್ಥಳದಲ್ಲಿ ಬದಲಾವಣೆ
ವಕೀಲರ ರಾಜ್ಯ ಸಮ್ಮೇಳನ: ಕಾರ್ಯಕ್ರಮದ ಸ್ಥಳದಲ್ಲಿ ಬದಲಾವಣೆ
ಮೈಸೂರು ವಕೀಲರ ಸಂಘದ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆಗಸ್ಟ್ 11 ಮತ್ತು 12, 2023ರಂದು ವಕೀಲರ 10ನೇ ರಾಜ್ಯ ಸಮ್ಮೇಳನವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದ ವೇದಿಕೆ ಮತ್ತು ಸ್ಥಳವನ್ನು ಬದಲಾಯಿಸಲಾಗಿದ್ದು, ವಕೀಲರ ಗಮನಿಸುವಂತೆ ರಾಜ್ಯ ಪರಿಷತ್ತು ಮನವಿ ಮಾಡಿಕೊಂಡಿದೆ.
ಈ ಹಿಂದೆ ನಿಗದಿಯಾದಂತೆ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಈ ಸಮ್ಮೇಳನಕ್ಕೆ ರಾಜ್ಯಾದ್ಯಂತ 12,000ಕ್ಕೂ ಅಧಿಕ ವಕೀಲರು ಹಾಜರಾಗುವುದಾಗಿ ನೋಂದಾವಣೆ ಮಾಡಿಕೊಂಡಿದ್ದಾರೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ವಕೀಲರ ಸಮುದಾಯ ಒಂದು ಕಡೆ ಸೇರಲಿದೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು ಪೂರ್ವನಿಗದಿಯಂತೆ ನಡೆಯಬೇಕಿದ್ದ ವಕೀಲರ ರಾಜ್ಯ ಸಮ್ಮೇಳನವನ್ನು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದ ಬದಲಾಗಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಬದಲಾಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿಶಾಲ್ ರಘು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಕೀಲರಿಗೆ ವಸ್ತ್ರ ಸಂಹಿತೆ:
ಇದೇ ವೇಳೆ, ರಾಜ್ಯ ವಕೀಲರ ಸಮ್ಮೇಳನಕ್ಕೆ ಹಾಜರಾಗುವ ವಕೀಲರು ತಮ್ಮ ವೃತ್ತಿಗೆ ಘನತೆ ತರುವ ವಸ್ತ್ರ ಸಂಹಿತೆ ಪಾಲಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮನವಿ ಮಾಡಿದೆ. ಪುರುಷರು ಬಿಳಿ ಅಂಗಿ, ಫಾರ್ಮಲ್ ಪ್ಯಾಂಟ್ ಮತ್ತು ಕಪ್ಪು ಶೂ ಧರಿಸುವಂತೆ ಸೂಚಿಸಲಾಗಿದೆ.
ಇದೇ ವೇಳೆ, ಮಹಿಳೆಯರು ಭಾರತದ ಸಂಸ್ಕೃತಿಗೆ ತಕ್ಕುದಾದ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವಂತೆ ಮನವಿ ಮಾಡಲಾಗಿದೆ. ಜೀನ್ಸ್ ಪ್ಯಾಂಟ್ ಧರಿಸುವುದನ್ನು ಸಮ್ಮೇಳನದಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು KSBC ಪ್ರಕಟಣೆ ತಿಳಿಸಿದೆ.
ವಕೀಲರ ಸಮ್ಮೇಳನಕ್ಕೆ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಗೌರವಾನ್ವಿತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಗೌ. ಪ್ರಸನ್ನ ಬಿ. ವರಾಳೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಕಾನೂನು ಸಚಿವರಾದ ಎಚ್. ಕೆ. ಪಾಟೀಲ್ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷರಾದ ವಿಶಾಲ್ ರಘು ಅವರು ವಹಿಸಲಿದ್ದಾರೆ.