ಸೋಮವಾರ ಕೋರ್ಟ್ ಕಲಾಪ ಇದೆಯೇ..? ರಜೆ ಬಗ್ಗೆ ಎದ್ದಿರುವ ಗೊಂದಲಕ್ಕೆ ಬ್ರೇಕ್!
ಸೋಮವಾರ ಕೋರ್ಟ್ ಕಲಾಪ ಇದೆಯೇ..? ರಜೆ ಬಗ್ಗೆ ಎದ್ದಿರುವ ಗೊಂದಲಕ್ಕೆ ಬ್ರೇಕ್!
ರಾಜ್ಯಾದ್ಯಂತ ಸೋಮವಾರ ಕೋರ್ಟ್ ಕಲಾಪ ಇದೆಯೇ..? ರಜೆ ಇದೆಯೇ..? ಎಂಬ ಬಗ್ಗೆ ವಕೀಲರ ಸಮುದಾಯದಲ್ಲಿ ವ್ಯಾಪಕ ಗೊಂದಲ ಇದೆ.
ಆಗಸ್ಟ್ 11 ಮತ್ತು 12ರಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು 10ನೇ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನಕ್ಕೆ ರಾಜ್ಯದ ವಿವಿಧ ಕಡೆಯಿಂದ ಸುಮಾರು 20 ಸಾವಿರಕ್ಕೂ ಅಧಿಕ ವಕೀಲರು ಸೇರಲಿದ್ದಾರೆ.
ಇದು ಈ ದಶಕದಲ್ಲೇ ಅತಿ ಹೆಚ್ಚು ವಕೀಲರ ಒಂದು ಕಡೆ ಸೇರಲಿರುವ ಕಾರ್ಯಕ್ರಮವಾಗಲಿದೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಮಂಗಳವಾರ ಸ್ವಾತಂತ್ಯ ದಿನಾಚರಣೆ ಇರುವುದರಿಂದ ಸೋಮವಾರ ರಜೆ ಸಿಕ್ಕಿದರೆ ಸತತ ನಾಲ್ಕು ದಿನಗಳ ಕಾಲ ರಜೆ ಸಿಕ್ಕಂತಾಗುತ್ತದೆ. ಈ ಕಾರಣಕ್ಕಾಗಿ ಸೋಮವಾರ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಬೇಕು ಎಂದು ಬೆಂಗಳೂರು ವಕೀಲರ ಒಕ್ಕೂಟ ಹೈಕೋರ್ಟ್ ಗೆ ಮನವಿ ಮಾಡಿತ್ತು.
ಆದರೆ, ಈ ಮನವಿಯನ್ನು ರಾಜ್ಯ ಹೈಕೋರ್ಟ್ ಪುರಸ್ಕರಿಸಿಲ್ಲ. ಹೀಗಾಗಿ, ಸೋಮವಾರ ಕೋರ್ಟ್ ಕಲಾಪ ಎಂದಿನಂತೆ ನಡೆಯಲಿದೆ.
ಈ ಮಧ್ಯೆ, ವಕೀಲರು ಕೋರ್ಟ್ ಕಲಾಪದಲ್ಲಿ ಭಾಗವಹಿಸದಿದ್ದರೆ ಪಕ್ಷಕಾರರಿಗೆ ತೊಂದರೆಯಾಗದಂತೆ ಯಾವುದೇ ವ್ಯತಿರಿಕ್ತ ಆದೇಶ ಹೊರಡಿಸದಂತೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ ಎಂದು ವಕೀಲರ ಪರಿಷತ್ತಿನ ಮೂಲಗಳು ಸ್ಪಷ್ಟಪಡಿಸಿವೆ.