"ಕಪ್ಪು ಚರ್ಮ"ದ ನಿಂದನೆ: ಪತಿ ವಿರುದ್ಧದ ಕ್ರೌರ್ಯ ಎಂದ ಹೈಕೋರ್ಟ್: ಡೈವರ್ಸ್ ಗ್ರಾಂಟೆಡ್!
"ಕಪ್ಪು ಚರ್ಮ"ದ ನಿಂದನೆ: ಪತಿ ವಿರುದ್ಧದ ಕ್ರೌರ್ಯ ಎಂದ ಹೈಕೋರ್ಟ್: ಡೈವರ್ಸ್ ಗ್ರಾಂಟೆಡ್!
ಪತಿಯನ್ನು ಸದಾ ಕಪ್ಪು ಬಣ್ಣದವ ಎಂದು ಸಂಬೋಧಿಸಿ, ಅದನ್ನೇ ಮುಂದಿಟ್ಟುಕೊಂಡು ಪತಿಯಿಂದ ದೂರ ಇದ್ದ ಪತ್ನಿಯ ನಡೆ ಕ್ರೌರ್ಯ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ವಿಚ್ಚೇದನ ನೀಡಲು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಆಲೋಕ್ ಅರಾಧೆ ಮತ್ತು ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ಪುರಸ್ಕರಿಸಿ, ಅರ್ಜಿದಾರರಿಗೆ ವಿಚ್ಚೇದನ ಮಂಜೂರು ಮಾಡಿದೆ.
ಕರಿ ಬಣ್ಣದವರು ಎಂದು ಹೀಯಾಳಿಸುತ್ತಿದ್ದ ಪತ್ನಿ ಯಾವುದೇ ಸ್ಪಷ್ಟವಾದ ಕಾರಣ ಇಲ್ಲದೆ ಪತಿಯನ್ನು ದೂರ ಮಾಡಿ ತವರು ಮನೆ ಸೇರಿದ್ದರು. ತಮ್ಮ ಈ ಕೃತ್ಯವನ್ನು ಮರೆ ಮಾಚಲು ಪತಿ ಮೇಲೆ ಅಕ್ರಮ ಸಂಬಂಧದ ಆರೋಪ ಹೊರಿಸಿದ್ದರು. ಇದು ನಿಸ್ಸಂದೇಹವಾಗಿ ಕ್ರೌರ್ಯದ ಅರ್ಥವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಧಾರ ಇಲ್ಲದೆ ಅಕ್ರಮ ಸಂಬಂಧದಂತಹ ಆರೋಪ ಮಾಡುವುದು ಅಪರಿಮಿತ ಮಾನಸಿಕ ಕ್ರೌರ್ಯ ಮಾಡಿದಂತೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪತಿಯ ಜೊತೆಗೆ ಬಾಳುತ್ತೇನೆ. ಆದರೆ, ಪತಿ ಮತ್ತು ಅವರ ಕುಟುಂಬ ಸದಸ್ಯರ ಮೇಲಿನ ಕ್ರಿಮಿನಲ್ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂಬ ಪತ್ನಿಯ ಹೇಳಿಕೆಯನ್ನು ಗಮನಿಸಿದರೆ ಆಕೆಗೆ ಮತ್ತೆ ಪತಿಯ ಜೊತೆ ಸಹಬಾಳ್ವೆ ನಡೆಸುವ ಇಂಗಿತ ಇಲ್ಲ ಎಂಬುದನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಕ್ರೌರ್ಯದ ಆಧಾರದಲ್ಲಿ ವಿಚ್ಚೇದನ ನೀಡಬಹುದು ಎಂದಿರುವ ನ್ಯಾಯಪೀಠ, ಒಂದು ವೇಳೆ ಜೀವನಾಂಶಕ್ಕೆ ಪತ್ನಿ ಅರ್ಜಿ ಸಲ್ಲಿಸಿದರೆ ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಿ ನಿರ್ಧರಿಸಬಹುದು ಎಂದು ಹೇಳಿದೆ.
ವಿವಾಹದ ಬಳಿಕ ಪತ್ನಿ ತನ್ನನ್ನು ಕಪ್ಪು ಚರ್ಮದವರೆಂದು ಸದಾ ಅಮಾನಿಸುತ್ತಿದ್ದರು. ಆದರೆ, ಮಗಳಿಗಾಗಿ ನಾನು ಎಲ್ಲ ಅವಮಾನವನ್ನು ಸಹಿಸುತ್ತಿದ್ದೆ ಎಂದು ಹೇಳಿರುವ ಪತಿ, ತಮ್ಮ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಮ್ಮನ್ನು ಕಿರುಕುಳ, ಹಿಂಸೆಗೀಡು ಮಾಡಿದ್ದಾರೆ ಎಂದು ಹೇಳಿದ್ದರು.
ಉದ್ಯೋಗದ ಸ್ಥಳಕ್ಕೂ ಬಂದು ಉಪದ್ರವ, ಆರೋಪ ಮಾಡಿದರು. ಇದರಿಂದ ನಾನು ಚಿತ್ತ ಕ್ಷೋಭೆ ಮತ್ತು ಮಾನಸಿಕ ಖಿನ್ನತೆಗೆ ಒಳಗಾದೆ. ಈ ಅಂಶವನ್ನು ಪರಿಗಣಿಸಿ ವಿಚ್ಚೇದನ ನೀಡುವಂತೆ ಪತಿ ನ್ಯಾಯಪೀಠದ ಮುಂದೆ ಮನವಿ ಮಾಡಿದ್ದರು.