ನಕಲಿ ಜಾತಿ ಪ್ರಮಾಣಪತ್ರ: ಗ್ರಾ. ಪಂ. ಮಾಜಿ ಅಧ್ಯಕ್ಷೆಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ಸತ್ರ ನ್ಯಾಯಾಲಯ
ನಕಲಿ ಜಾತಿ ಪ್ರಮಾಣಪತ್ರ: ಗ್ರಾ. ಪಂ. ಮಾಜಿ ಅಧ್ಯಕ್ಷೆಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ಸತ್ರ ನ್ಯಾಯಾಲಯ
ಸುಳ್ಳು ದಾಖಲೆ ಸೃಷ್ಟಿ ಮಾಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿ ಬಳಿಕ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ ಮಹಿಳೆಗೆ ಹಾವೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಶಿಗ್ಗಾಂವಿ ಪೊಲೀಸರು ದಾಖಲಿಸಿದ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಈ ಮಹತ್ವದ ತೀರ್ಪು ನೀಡಿದ್ದು, ಆರೋಪಿಗೆ ಏಳು ವರ್ಷಗಳ ಜೈಲು ಶಿಕ್ಷೆ ಜೊತೆಗೆ 19 ಸಾವಿರ ರೂ. ದಂಡ ವಿಧಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಜಿ. ಶ್ರೀಧರ ಶಾಸ್ತ್ರಿ ಆರೋಪ ಪಟ್ಟಿ ಸಲ್ಲಿಸಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜ ಕೂಡಲಮಠ ವಾದ ಮಂಡಿಸಿದರು.
ಘಟನೆಯ ವಿವರ:
ಶಿಗ್ಗಾಂವಿ ತಾಲೂಕಿನ ವನಹಳ್ಳಿ ಗ್ರಾಮದ ಲಕ್ಷ್ಮೀ ಮಾರುತಿ ಕಬ್ಬೇರ ಹಿಂದೂ ಗಂಗಾಮತ (ಪ್ರವರ್ಗ-I)ಕ್ಕೆ ಸೇರಿದ್ದರೂ ಸುಳ್ಳು ವ್ಯಾಸಂಗ ಪ್ರಮಾಣಪತ್ರ ಸಲ್ಲಿಸಿದ್ದರು. ಜೊತೆಗೆ ಸುಳ್ಳು ಅಫಿಡವಿಟ್ (ಘೋಷಣಾ ಪತ್ರ)ವನ್ನೂ ಸಲ್ಲಿಸಿದ್ದರು.
ಅಷ್ಟೇ ಅಲ್ಲದೆ, ಲಕ್ಷ್ಮೀ ಮಾರುತಿ ಕಬ್ಬೇರ ಅವರು ಇತರ ದಾಖಲಾತಿಗಳನ್ನು ಸೃಷ್ಟಿಸಿ 2015ರಲ್ಲಿ ಶಿಗ್ಗಾಂವಿ ತಹಶೀಲ್ದಾರ್ ಕಚೇರಿಯಿಂದ ಹಿಂದೂ ಗಂಟಿಚೋರ್ಸ್ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು.
ಇದನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ ಅನ್ವಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹನುಮರಹಳ್ಳಿ ಕ್ಷೇತ್ರದಿಂದ ಜಯ ಗಳಿಸಿದರು. ನಂತರ ಎಸ್.ಸಿ. ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೂ ಆಯ್ಕೆಯಾಗಿ ಅಧಿಕಾರ ಅನುಭವಿಸಿದರು.
ಈ ಬಗ್ಗೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೆ, ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಕ್ಕೆ ಮೋಸ ಮಾಡಿದ ಹಾಗೂ ನೈಜ ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಅನ್ಯಾಯ ಮಾಡಿದ ಆರೋಪದಲ್ಲಿ ಮಹಿಳೆ ವಿರುದ್ಧ ಆರೋಪ ಪಟ್ಟಿ ದಾಖಲಾಯಿತು.
ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಏಳು ವರ್ಷಗಳ ಶಿಕ್ಷೆಯನ್ನು ಘೋಷಿಸಲಾಗಿದೆ.