ವಕೀಲರ ಕಚೇರಿಯಲ್ಲಿ ಮದುವೆ ನಡೆದರೂ ಹಿಂದೂ ವಿವಾಹ ಕಾಯ್ದೆಯಡಿ ಮನ್ನಣೆ: ಸುಪ್ರೀಂ ಕೋರ್ಟ್
ವಕೀಲರ ಕಚೇರಿಯಲ್ಲಿ ಮದುವೆ ನಡೆದರೂ ಹಿಂದೂ
ವಿವಾಹ ಕಾಯ್ದೆಯಡಿ ಮನ್ನಣೆ: ಸುಪ್ರೀಂ ಕೋರ್ಟ್
ವಕೀಲರ ಕಚೇರಿಯಲ್ಲಿ ವಧೂ-ವರರರು ಮದುವೆ ಸಮಾರಂಭವನ್ನು
ನಡೆಸಿದರೂ ಅದಕ್ಕೆ ಹಿಂದೂ ವಿವಾಹ ಕಾಯ್ದೆಯಡಿ ಮನ್ನಣೆ ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ
ತೀರ್ಪು ನೀಡಿದೆ.
ಗಂಡು ಮತ್ತು ಹೆಣ್ಣು ಒಪ್ಪಿ ಪರಸ್ಪರ ಹಾರಗಳನ್ನು
ಬದಲಾಯಿಸಿಕೊಂಡರೆ ಅಥವಾ ಉಂಗುರ ತೊಡಿಸುವ ಮೂಲಕ ಸರಳವಾಗಿ ಮದುವೆಯ ಸಮಾರಂಭವನ್ನು ಮುಗಿಸಿದರೆ ಅದಕ್ಕೆ
ಹಿಂದೂ ವಿವಾಹ ಕಾಯ್ದೆಯಡಿ ಮನ್ನಣೆ ಸಿಗುತ್ತದೆ ಎಂದು ನ್ಯಾ. ಎಸ್. ರವೀಂದ್ರ ಭಟ್ ಹಾಗೂ ಅರವಿಂದ ಕುಮಾರ್
ಅವರಿದ್ದ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ಅರ್ಚಕರ ಉಪಸ್ಥಿತಿ ಇಲ್ಲದೆಯೂ ನಡೆಯುವ ವಿವಾಹಕ್ಕೆ
ಕಾನೂನಿನ ಅಡಿಯಲ್ಲಿ ಮನ್ನಣೆ ನೀಡುವುದಕ್ಕೆ ಹಿಂದೂ ವಿವಾಹ ಕಾಯ್ದೆಯಡಿ ಅವಕಾಶ ಇದೆ. ಸಂಬಂಧಿಕರು,
ಗಣ್ಯರು, ಬಂಧು-ಮಿತ್ರರು ಮತ್ತು ಇತರ ವ್ಯಕ್ತಿಗಳ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ
ನಡೆಯುವ ಮದುವೆ ಸಮಾರಂಭಕ್ಕೆ ಸೆಕ್ಷನ್ 7(ಎ) ಅನ್ವಯಿಸುತ್ತದೆ ಎಂಬುದನ್ನು ನ್ಯಾಯಪೀಠ ಹೇಳಿದೆ.
ಅಪರಿಚಿತರ ಸಮ್ಮುಖದಲ್ಲಿ ರಹಸ್ಯವಾಗಿ ನಡೆಯುವ
ವಿವಾಹಕ್ಕೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಮತ್ತು ಸೆಕ್ಷನ್ 7(ಎ) ಸಮ್ಮತಿಸುವುದಿಲ್ಲ. ಇಂತಹ
ವಿವಾಹವನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು.
ಈ ಆದೇಶವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ವಕೀಲರ ಮುಂದೆ ನಡೆದ ಮದುವೆಯನ್ನು ಸಿಂಧುಗೊಳಿಸಿದೆ.
ವಕೀಲರು ಕೇವಲ ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುವುದಕ್ಕೆ
ಸೀಮಿತವಾಗಿಲ್ಲ. ಸ್ನೇಹಿತ, ಸಂಬಂಧಿ ಹಾಗೂ ಸಾಮಾಜಿಕ ಕಾರ್ಯಕರ್ತನ ಸ್ಥಾನದಲ್ಲಿ ನಿಂತುಕೊಂಡು ಮದುವೆ
ನಡೆಸಬಹುದು. ಇದನ್ನು ಕಾಯ್ದೆಯ ಸೆಕ್ಷನ್ 7 ಅಡಿಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂಬುದನ್ನು ನ್ಯಾಯಪೀಠ
ಹೇಳಿದೆ.