-->
ಮನೆಯಲ್ಲಿ ಗೃಹಿಣಿ ಮಾಡುವ ಮನೆಕೆಲಸವೂ ಆರ್ಥಿಕ ಚಟುವಟಿಕೆ: ಸುಪ್ರೀಂ ಕೋರ್ಟ್

ಮನೆಯಲ್ಲಿ ಗೃಹಿಣಿ ಮಾಡುವ ಮನೆಕೆಲಸವೂ ಆರ್ಥಿಕ ಚಟುವಟಿಕೆ: ಸುಪ್ರೀಂ ಕೋರ್ಟ್

ಮನೆಯಲ್ಲಿ ಗೃಹಿಣಿ ಮಾಡುವ ಮನೆಕೆಲಸವೂ ಆರ್ಥಿಕ ಚಟುವಟಿಕೆ: ಸುಪ್ರೀಂ ಕೋರ್ಟ್





ಮನೆಯಲ್ಲಿ ಗೃಹಿಣಿಯರು ತಾವು ಮಾಡುವ ಮನೆ ಕೆಲಸವೂ ಆರ್ಥಿಕ ಚಟುವಟಿಕೆ ಎಂದು ಪರಿಗಣಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.


ದೇಶದ ಅಭಿವೃದ್ಧಿಯನ್ನು ಮಾಪನ ಮಾಡುವ ನಿಖರ ಅಳತೆಗೋಲು 'ರಾಷ್ಟ್ರೀಯ ವರಮಾನ' ಅಲ್ಲ. ಅದಕ್ಕೆ ಒಂದು ಪ್ರಮುಖ ಕಾರಣ ರಾಷ್ಟ್ರೀಯ ಆದಾಯವನ್ನು ಅಂದಾಜಿಸುವಾಗ ವೇತನ ರಹಿತ ಸೇವೆಯನ್ನು ಪರಿಗಣಿಸುವುದಿಲ್ಲ. ವೇತನ ರಹಿತ ಸೇವೆಗಳಲ್ಲಿ ಮುಖ್ಯವಾದದ್ದು ಗೃಹಿಣಿಯರು ಮನೆಯಲ್ಲಿ ಸಲ್ಲಿಸುವ ಸೇವೆ.


ಆದರೆ, Kirti vs Orientals Insurance ಪ್ರಕರಣದಲ್ಲಿ ಮಾನ್ಯ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಇದಕ್ಕೆ ಭಿನ್ನವಾಗಿದೆ. ಈ ಪ್ರಕರಣದ ವಿವರ ಹೀಗಿದೆ:


2014ರ ಏಪ್ರಿಲ್ ತಿಂಗಳಿನಲ್ಲಿ ದಂಪತಿ ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿತು. ಈ ಅಪಘಾತದಲ್ಲಿ ದಂಪತಿಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು. ಗಂಡ ಶಿಕ್ಷಕರಾಗಿದ್ದು ಹೆಂಡತಿ “ಗೃಹಿಣಿ”ಯಾಗಿ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.


ಪತಿಯ ಆದಾಯವನ್ನೇ ಏಕಮಾತ್ರವಾಗಿ ಪರಿಗಣಿಸಿದ ವಿಮಾ ಕಂಪೆನಿಯು ಮೃತನ ತಂದೆ ಮತ್ತು ದಂಪತಿಯ ಇಬ್ಬರು ಹೆಣ್ಣು ಮಕ್ಕಳಿಗೆ ಪರಿಹಾರವಾಗಿ ರೂ 11.20 ಲಕ್ಷಗಳ ಚೆಕ್ಕನ್ನು ನೀಡುತ್ತದೆ. ಇದನ್ನು ಪ್ರಶ್ನಿಸಿ ದಾವೆದಾರರು ಸುಪ್ರೀಂ ಕೋರ್ಟ್ ವರೆಗೂ ಮೇಲ್ಮನವಿ ಸಲ್ಲಿಸಿದರು.


ಮೇಲ್ಮನವಿದಾರರು ತಮ್ಮ ಮೇಲ್ಮನವಿಯಲ್ಲಿ ಎತ್ತಿರುವ ತಕರಾರೆಂದರೆ, ವಿಮಾ ಕಂಪನಿ ಪರಿಹಾರ ನಿರ್ಧರಿಸುವಾಗ ಕೇವಲ ಪತಿಯ ಆದಾಯದ ಆಧಾರದ ಮೇಲೆ ನಿಗದಿಪಡಿಸಿದೆಯೇ ಹೊರತು, ಪತ್ನಿ ತನ್ನ ಮನೆಯಲ್ಲಿ ಸಲ್ಲಿಸುವ ವೇತನ ರಹಿತ ಸೇವೆಯನ್ನು ಯಾರೂ ಪರಿಗಣಿಸಿಲ್ಲ. ವೇತನ ಪಡೆಯದಿದ್ದ ಮಾತ್ರಕ್ಕೆ ಗೃಹಿಣಿಯರು ಸಲ್ಲಿಸುವ ಸೇವೆಯನ್ನು ಪರಿಹಾರದ ಮೊತ್ತವನ್ನು ನಿಗದಿಪಡಿಸುವಾಗ ಪರಿಗಣಿಸದಿರುವುದು ನ್ಯಾಯ ಸಮ್ಮತವಲ್ಲ. ಆದುದರಿಂದ ಗೃಹಿಣಿಯು ಮನೆಯಲ್ಲಿ ಸಲ್ಲಿಸುವ ಸೇವೆಯನ್ನೂ ಪರಿಗಣಿಸಿ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಕೋರಲಾಯಿತು.


ಎರಡೂ ಕಡೆಗಳ ವಾದ ವಿವಾದಗಳನ್ನು ಆಲಿಸಿ ಸುಪ್ರೀಂ ಕೋರ್ಟ್ ಪರಿಹಾರದ ಮೊತ್ತವನ್ನು ರೂ 11.20 ಲಕ್ಷದಿಂದ ರೂ 33.20 ಲಕ್ಷಕ್ಕೇರಿಸಿ ತನ್ನ ತೀರ್ಮಾನವನ್ನು ನೀಡಿತು. ಇದರ ಜೊತೆಗೆ 2014 ರಿಂದ ಶೇಕಡ 9 ರಷ್ಟು ಬಡ್ಡಿಯನ್ನೂ ಎರಡು ತಿಂಗಳೊಳಗಾಗಿ ಪಾವತಿಸಲು ಆಜ್ಞಾಪಿಸಿತು.

ನ್ಯಾ. ಎನ್ ವಿ ರಮಣ, ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಅಬ್ದುಲ್ ನಜೀರ್ ಅವರು ತ್ರಿಸದಸ್ಯ ನ್ಯಾಯಪೀಠದಲ್ಲಿದ್ದರು.


ನ್ಯಾ. ಎನ್.ವಿ. ರಮಣ ವರು ಬರೆದ ಅಂತಿಮ ತೀರ್ಪು ಹೀಗಿದೆ:


1. ಗೃಹಿಣಿ ತನ್ನ ಮನೆಯಲ್ಲಿ ಮಾಡುವ ಕೆಲಸವು ಗಂಡಸರು ಹೊರಗೆ ಕಛೇರಿಗಳಲ್ಲಿ ಮಾಡುವ ಕೆಲಸದಷ್ಟೆ ಮೌಲ್ಯಯುತವಾದದ್ದು. ಗೃಹಿಣಿಯರು ಮನೆ ಕೆಲಸಕ್ಕೆ ವೇತನ ಪಡೆಯುವುದಿಲ್ಲವೆಂದ ಮಾತ್ರಕ್ಕೆ, ನಿರುಪಯುಕ್ತ, ಮೌಲ್ಯವಿಲ್ಲದ ಕೆಲಸವೆಂದು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಗೃಹಿಣಿಯರು ಮನೆಯಲ್ಲಿ ಮಾಡುವ ಕೆಲಸಗಳನ್ನು ಸೇವೆಯೆಂದು ಪರಿಗಣಿಸಿ, ಕಾಲ್ಪನಿಕ ಆದಾಯವನ್ನು (notional Income) ನಿಗದಿಪಡಿಸಿ ಪರಿಹಾರವನ್ನು ಘೋಷಿಸಬೇಕು.

ಗೃಹಿಣಿಯರ ಕೆಲಸ, ಶ್ರಮ ಮತ್ತು ತ್ಯಾಗಕ್ಕನುಗುಣವಾಗಿ ಕಾಲ್ಪನಿಕ ಆದಾಯವನ್ನು ನಿಗದಿಪಡಿಸಬೇಕು ಎಂದೂ ಸಹ ಅದು ಆಜ್ಞಾಪಿಸಿತು.


2. 2011ರ ಜನಗಣತಿ ಪ್ರಕಾರ, ಭಾರತದಲ್ಲಿ 159.85 ಮಿಲಿಯನ್ ಮಹಿಳೆಯರು 'ಗೃಹಕೃತ್ಯ' ತಮ್ಮ ಮುಖ್ಯ ಉದ್ಯೋಗವೆಂದು ಘೋಷಿಸಿಕೊಂಡಿದ್ದಾರೆ. ಆದರೆ ಕೇವಲ 5.79 ಪುರುಷರು ಗೃಹಕೃತ್ಯ ತಮ್ಮ ಮುಖ್ಯ ಉದ್ಯೋಗವೆಂದು ಘೋಷಿಸಿಕೊಂಡಿದ್ದಾರೆ.


3. ರಾಷ್ಟ್ರೀ ಸಾಂಖ್ಯಿಕ ಕಚೇರಿಯ ವರದಿ ಪ್ರಕಾರ ಹೆಂಗಸರು ಪ್ರತಿದಿನ ಸರಾಸರಿ 299 ನಿಮಿಷಗಳನ್ನು ವೇತನ ರಹಿತ ಮನೆ ಕೆಲಸದಲ್ಲಿ ತೊಡಗಿದ್ದರೆ, ಗಂಡಸರು ಕೇವಲ 97 ನಿಮಿಷಗಳನ್ನು ಮಾತ್ರ ವೇತನ ರಹಿತ ಮನೆ ಕೆಲಸದಲ್ಲಿ ತೊಡಗಿರುತ್ತಾರೆ.


4. ಮಹಿಳೆಯರು ತಮ್ಮ ಮನೆಗಳಲ್ಲಿ ಮಾಡುವ ಕೆಲಸಗಳು ಅಸಂಖ್ಯ. ಇಡೀ ಕುಟುಂಬಕ್ಕೆ ಆಹಾರ ತಯಾರಿಕೆಯಿಂದ ಹಿಡಿದು, ಅಂಗಡಿಯಿಂದ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತರುವುದು, ಮನೆಯನ್ನು ಶುಚಿಯಾಗಿ ಇಡುವುದು, ರುಚಿಯಾದ ಅಡುಗೆ ಮಾಡುವುದು, ಅಬಾಲ ವೃದ್ಧರನ್ನು ಪೋಷಿಸಿ ಸಲಹುವುದು, ಗ್ರಾಮೀಣ ಪ್ರದೇಶದಲ್ಲಾದರೆ ಮನೆಯಲ್ಲೂ ದುಡಿದು, ದನ ಕರುಗಳನ್ನು ಪೋಷಿಸುವುದು, ಜೊತೆಗೆ ಹೊಲ ಗದ್ದೆಗಳಲ್ಲಿ ಪುರುಷರ ಜೊತೆಯಲ್ಲಿ ಸರಿಸಮಾನವಾಗಿ ದುಡಿಯುವುದು. ಹೀಗೆ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಈ ಯಾವ ಕೆಲಸಗಳಿಗೂ ಅವರು ವೇತನ ಪಡೆಯುವುದಿಲ್ಲ. ಅದೇ ಪುರುಷ ಹೊರಗಡೆ ಕಛೇರಿಗಳಲ್ಲಿ ಮಾಡಿದ ಕೆಲಸಗಳಿಗೆ ವೇತನ ಪಡೆಯುತ್ತಾನೆ.


5. ಮಹಿಳೆಯರು ತಮ್ಮ ಮಕ್ಕಳ ಹಾಗೂ ಹಿರಿಯರ ಪಾಲನೆ ಪೋಷಣೆಗೆ ದಿನಕ್ಕೆ ಸರಾಸರಿ 134 ನಿಮಿಷಗಳನ್ನು ಮೀಸಲಾಗಿಟ್ಟರೆ ಪುರುಷರು ಕೇವಲ 76 ನಿಮಿಷಗಳನ್ನು ಈ ಕೆಲಸಗಳಿಗೆ ಮೀಸಲಾಗಿ ಇಟ್ಟಿದ್ದಾರೆ.


6 ಮಹಿಳೆಯರು ತನ್ನ ಪತ್ನಿ. ಗೃಹಿಣಿ ತನ್ನ ಸೇವೆಗಳಿಗೆ ವೇತನ ಪಡೆಯುವುದಿಲ್ಲ ಎಂದ ಮಾತ್ರಕ್ಕೆ ಅದು ಮೌಲ್ಯರಹಿತ ಎಂದು ಪರಿಗಣಿಸುವುದ ಅಸಾಧ್ಯ. ಅವಳ ಅತ್ಯಮೂಲ್ಯವಾದ ಸೇವೆಯಿಂದ ಮಾತ್ರ ಸಂಸಾರ ಸುಸೂತ್ರವಾಗಿ ನಡೆಯಲು ಸಾಧ್ಯ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಗೃಹಿಣಿಯರ ಪಾತ್ರ ಬಹಳ ಮುಖ್ಯವಾದದ್ದು. ಅವರು ಸಲ್ಲಿಸುವ ಸೇವೆಯನ್ನೂ 'ಆರ್ಥಿಕ ಚಟುವಟಿಕೆ' ಎಂದು ಪರಿಗಣಿಸಿ ಕಾಲ್ಪನಿಕ ಆದಾಯವನ್ನು ನಿಗದಿ ಪಡಿಸಿದ ನಂತರ ಪರಿಹಾರದ ಮೊತ್ತವನ್ನು ನಿರ್ಧರಿಸಬೇಕು.


ಹೀಗಾಗಿ, ಇದನ್ನು ಸಂವಿಧಾನದ ಆಶಯದಂತೆ, ಸಾಮಾಜಿಕ ಸಮಾನತೆ ಹಾಗೂ ಮಹಿಳೆಯರ ಘನತೆ ಗೌರವವನ್ನು ಕಾಪಾಡಿದಂತಾಗುತ್ತದೆ. ಇದು ನಮ್ಮ ಸಂವಿಧಾನದ ಆಶಯವೂ ಹೌದು.


ಪ್ರಕರಣ: ಕೀರ್ತಿ Vs ಓರಿಯಂಟಲ್ ಇನ್ಶೂರೆನ್ಸ್

ಸುಪ್ರೀಂ ಕೋರ್ಟ್ C.P. No.1920/2021, Dated 5.1.2021


Ads on article

Advertise in articles 1

advertising articles 2

Advertise under the article