ವಾಹನ ಚಾಲಕರು ಲಿಪಿಕ ನೌಕರರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ವಾಹನ ಚಾಲಕರು ಲಿಪಿಕ ನೌಕರರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಪ್ರಥಮ ರಾಷ್ಟ್ರೀಯ ವೇತನ ಆಯೋಗದ ಶಿಫಾರಸಿನ ಪ್ರಕಾರ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಿಪಿಕ ನೌಕರರಿಗೆ ಒಂದು ಹೆಚ್ಚುವರಿ ವೇತನ ಭಡ್ತಿಯನ್ನು ದಿನಾಂಕ 1.4.2003 ರಿಂದ ಅನ್ವಯವಾಗುವಂತೆ ನೀಡಲು ಘನ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಆ ಪ್ರಕಾರ, ನ್ಯಾಯಾಂಗ ಇಲಾಖೆಯ ಶಿರಸ್ತೆದಾರ್, ಎಫ್.ಡಿ.ಎ, ಎಸ್.ಡಿ.ಎ, ಟೈಪಿಸ್ಟ್, ಟೈಪಿಸ್ಟ್- ಕಾಪಿಸ್ಟ್ ಮುಂತಾದ ಪದವೃಂದದ ನೌಕರರು ಸದರಿ ಆದೇಶದ ಲಾಭವನ್ನು ಪಡೆದಿರುತ್ತಾರೆ.
ದಿನಾಂಕ 1.4.2003 ರ ಬಳಿಕ ನ್ಯಾಯಾಂಗ ಇಲಾಖೆಗೆ ಮೇಲ್ಕಾಣಿಸಿದ ಪದವೃಂದದಲ್ಲಿ ಹೊಸದಾಗಿ ಸೇವೆಗೆ ಸೇರಿದ ನೌಕರರಿಗೂ ಒಂದು ಹೆಚ್ಚುವರಿ ವೇತನ ಭಡ್ತಿಯ ಲಾಭ ದೊರಕುತ್ತಿದೆ. ಈ ರೀತಿಯ ಹೆಚ್ಚುವರಿ ವೇತನ ಭಡ್ತಿಯ ಸವಲತ್ತು ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ರಾಜ್ಯ ಸರಕಾರದ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಲಭ್ಯವಿಲ್ಲ.
ನ್ಯಾಯಾಂಗ ಇಲಾಖೆಯಲ್ಲಿ ವಾಹನ ಚಾಲಕ, ಬೇಲಿಫ್, ಪ್ರೋಸೆಸ್ ಸರ್ವರ್, ಅಟೆಂಡರ್ ಮತ್ತು ಜವಾನ ಈ ಪದವೃಂದಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ತಾವು ಇತರ ನೌಕರರಂತೆ ಒಂದು ಹೆಚ್ಚುವರಿ ವೇತನ ಭಡ್ತಿಯಿಂದ ವಂಚಿತರಾಗಿರುವ ಬಗ್ಗೆ ಅತೃಪ್ತರಾಗಿದ್ದರು. ಸದರಿ ಪದವೃಂದದ ನೌಕರರು ಲಿಪಿಕ ನೌಕರರಲ್ಲ ಎಂಬ ಕಾರಣಕ್ಕೆ ಹೆಚ್ಚುವರಿ ವೇತನ ಭಡ್ತಿಗೆ ಅರ್ಹರಲ್ಲ ಎಂಬುದು ಸರಕಾರದ ನಿಲುವಾಗಿತ್ತು.
ಈತನ್ಮಧ್ಯೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದಲ್ಲಿ ಕಚೇರಿ ಹೊಂದಿರುವ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಬೇಲಿಫ್ ಮತ್ತು ಪ್ರೋಸೆಸ್ ಸರ್ವರ್ ಗಳ ಕೇಂದ್ರ ಸಂಘವು ಲಿಪಿಕ ನೌಕರರ ಪರಿಭಾಷೆಯ ವ್ಯಾಪ್ತಿಯಲ್ಲಿ ಬೇಲಿಫ್ ಮತ್ತು ಪ್ರೋಸೆಸ್ ಸರ್ವರ್ ಹುದ್ದೆಗಳನ್ನು ಸೇರಿಸಬೇಕು ಹಾಗೂ ಒಂದು ಹೆಚ್ಚುವರಿ ವೇತನ ಭಡ್ತಿ ನೀಡುವಂತೆ ಸರಕಾರಕ್ಕೆ ಸೂಕ್ತ ಶಿಫಾರಸು ಮಾಡಬೇಕೆಂದು ಕೋರಿ ಮಾನ್ಯ ಕರ್ನಾಟಕ ಹೈಕೋರ್ಟಿನ ಮಹಾ ವಿಲೇಖನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೇಲಿಫ್ ಮತ್ತು ಪ್ರೋಸೆಸ್ ಸರ್ವರ್ ಹುದ್ದೆ ಲಿಪಿಕ ನೌಕರರ ಹುದ್ದೆಯಡಿ ಬರುವುದರಿಂದ ಅವರಿಗೂ ಒಂದು ಹೆಚ್ಚುವರಿ ವೇತನ ಭಡ್ತಿ ನೀಡುವಂತೆ ಮಾನ್ಯ ಹೈಕೋರ್ಟಿನ ಮಹಾ ವಿಲೇಖನಾಧಿಕಾರಿಗಳು ಕರ್ನಾಟಕ ಸರಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ ದಿನಾಂಕ 15.9.2011ರಂದು ಪತ್ರ ಬರೆದು ಸೂಕ್ತ ಸರಕಾರಿ ಆದೇಶ ಹೊರಡಿಸುವಂತೆ ಕೋರಿದ್ದರು. ಆದರೆ ಸರಕಾರವು ಕೆಸಿಎಸ್ಆರ್ ನ ನಿಯಮ 8(29) ರ ಅಡಿ ಲಿಪಿಕ ನೌಕರರ ಪರಿಭಾಷೆಯ ವ್ಯಾಪ್ತಿಯಲ್ಲಿ ಬೇಲಿಫ್ ಮತ್ತು ಪ್ರೋಸೆಸ್ ಸರ್ವರ್ ಗಳ ಹುದ್ದೆಗಳು ಬರುವುದಿಲ್ಲವೆಂಬ ಕಾರಣ ನೀಡಿ ಮನವಿಯನ್ನು ತಿರಸ್ಕರಿಸಿತು.
ಸದರಿ ಆದೇಶದಿಂದ ಬಾಧಿತರಾದ ಬೇಲಿಫ್ ಹಾಗೂ ಪ್ರೋಸೆಸ್ ಸರ್ವರ್ ಗಳ ಕೇಂದ್ರ ಸಂಘವು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ, 28532/2012 ದಾಖಲಿಸಿತು. ಬೇಲಿಫ್ ಮತ್ತು ಪ್ರೊಸೆಸರ್ ಗಳ ಹುದ್ದೆಯಲ್ಲಿ ಬರವಣಿಗೆಯ ಕೆಲಸ ಇದೆ ಎಂಬ ರಿಟ್ ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಅವರ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ಸರಕಾರಕ್ಕೆ ನಿರ್ದೇಶಿಸಿತು. ತತ್ಪರಿಣಾಮವಾಗಿ ಬೇಲಿಫ್ ಹಾಗೂ ಪ್ರೋಸೆಸ್ ಸರ್ವರ್ ಅವರುಗಳು ಒಂದು ಹೆಚ್ಚುವರಿ ವೇತನ ಭಡ್ತಿಗೆ ಅರ್ಹತೆ ಪಡೆಯುವಂತಾಯಿತು.
ಬೇಲಿಫ್ ಮತ್ತು ಪ್ರೋಸೆಸ್ ಸರ್ವರ್ ರವರು ಲಿಪಿಕ ನೌಕರರೆಂದು ಪರಿಗಣಿಸಿರುವ ಸರಕಾರದ ಆದೇಶದಿಂದ ಪ್ರೇರಿತರಾದ ನ್ಯಾಯಾಂಗ ಇಲಾಖೆಯ ವಾಹನ ಚಾಲಕರು ತಮ್ಮನ್ನು ಕೂಡ ಲಿಪಿಕ ನೌಕರರೆಂದು ಪರಿಗಣಿಸಬೇಕು ಹಾಗೂ ಒಂದು ಹೆಚ್ಚುವರಿ ವೇತನ ಭಡ್ತಿಯನ್ನು ನೀಡಬೇಕೆಂದು ಕೋರಿ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 52994/2013 ದಾಖಲಿಸಿದರು.
ಸದರಿ ಅರ್ಜಿಯಲ್ಲಿ ವಾಹನ ಚಾಲಕರು ಬರವಣಿಗೆಯ ಕರ್ತವ್ಯವನ್ನು ನಿರ್ವಹಿಸುತ್ತಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಹಾಗೂ ವಾಹನ ಚಾಲಕ ಹುದ್ದೆಯು ಲಿಪಿಕ ನೌಕರರ ಹುದ್ದೆಯ ಪರಿಭಾಷೆಯಡಿ ಬರುವುದಿಲ್ಲ ಎಂಬ ಸರಕಾರದ ಪರವಾಗಿ ಮಂಡಿಸಿದ ವಾದವನ್ನು ದಿನಾಂಕ 10.9.2014 ರಂದು ಹೊರಡಿಸಿದ ಆದೇಶದಲ್ಲಿ ಪುರಸ್ಕರಿಸಿದ ಹೈಕೋರ್ಟ್ ವಾಹನ ಚಾಲಕರ ಮನವಿಯನ್ನು ತಿರಸ್ಕರಿಸಿತು.
ಪ್ರಸ್ತುತ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಪೈಕಿ ವಾಹನ ಚಾಲಕರು, ಅಟೆಂಡರ್ ಮತ್ತು ಜವಾನ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಒಂದು ಹೆಚ್ಚುವರಿ ವೇತನ ಭಡ್ತಿಯಿಂದ ವಂಚಿತರಾಗಿದ್ದಾರೆ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ