ಐಪಿಸಿ 354(D) ದುರ್ಬಳಕೆ: ಸಂಜ್ಞೇಯತೆ ಮುನ್ನ ದಾಖಲೆ ಪರಿಶೀಲಿಸಿ- ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ
ಐಪಿಸಿ 354(D) ದುರ್ಬಳಕೆ: ಸಂಜ್ಞೇಯತೆ ಮುನ್ನ ದಾಖಲೆ ಪರಿಶೀಲಿಸಿ- ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354(D) ಅನ್ವಯ ಪ್ರಕರಣದಲ್ಲಿ ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ವಿಚಾರಣೆಗೆ ಮುಂದಾಗುವ ಮುನ್ನ ಸೂಕ್ತ ಸಾಕ್ಷ್ಯಾಧಾರಗಳನ್ನು ದಾಖಲಿಸಿಕೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇಲ್ಲದಿದ್ದರೆ, ಕಾನೂನಿನ ದುರ್ಬಳಕೆ ಆಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಬಿಎಚ್‌ಇಎಲ್ ಉದ್ಯೋಗಿಗಳಾದ ಎಂ. ಸಿ. ನಾಗರಾಜ್ ಮತ್ತು ಸಿ. ನರಸಿಂಹ ಮೂರ್ತಿ ಅವರು ಸಲ್ಲಿಸಿದ್ದ ಅರ್ಜಿ CrlP 350/2023 ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅರ್ಜಿದಾರರ ವಿರುದ್ಧ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಷ್ಟೇ ಅಲ್ಲದೆ, ಹಿಂಬಾಲಿಸಿಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳೂ ಇಲ್ಲ. ಇದು ದುರುದ್ದೇಶಪೂರ್ವಕ ದೂರು ಎಂದು ಅರ್ಜಿದಾರರ ಪರ ವಕೀಲರಾದ ಸಂದೇಶ್ ಜೆ. ಚೌಟ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.
ದೂರುದಾರ ಮಹಿಳೆಯು ತಮ್ಮ ಸಹೋದ್ಯೋಗಿಗಳ ವಿರುದ್ಧ ಪದೇ ಪದೇ ಸುಳ್ಳು ದೂರು ನೀಡುತ್ತಿದ್ದಾರೆ. ಇದು ಅವರಿಗೆ ವಾಡಿಕೆಯಾಗಿ ಹೋಗಿದೆ ಮತ್ತು ಕಾನೂನಿನ ದುರ್ಬಳಕೆಯಾಗಿದೆ ಎಂದು ಅವರು ಹೇಳಿದರು.
ಸದ್ರಿ ಪ್ರಕರಣದಲ್ಲಿ ಪೊಲೀಸರೂ ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354(D) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ದೋಷಾರೋಪವನ್ನೂ ಸಲ್ಲಿಸಿದ್ದಾರೆ. ಇದನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ ಪ್ರಕರಣವನ್ನು ರದ್ದುಪಡಿಸಿತು.