ಚೆಕ್ ಅಮಾನ್ಯ ಪ್ರಕರಣ: ITRನಲ್ಲಿ ಸಾಲ ದಾಖಲಾಗಿಲ್ಲ ಎಂಬ ಕಾರಣಕ್ಕೆ ದೂರು ವಜಾಗೊಳಿಸಲಾಗದು: ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ಆದಾಯ ತೆರಿಗೆ ದಾಖಲೆಯಲ್ಲಿ ಸಾಲವನ್ನು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ದೂರನ್ನು ವಜಾಗೊಳಿಸಲಾಗದು- ಹೈಕೋರ್ಟ್ ತೀರ್ಪು
ಚೆಕ್ ಅಮಾನ್ಯ ಪ್ರಕರಣದಲ್ಲಿ ಚೆಕ್ ಹೊಂದಿರುವವರು ಸಾಲ ನೀಡಿದ ಕುರಿತು ಆದಾಯ ತೆರಿಗೆ ದಾಖಲೆಯಲ್ಲಿ ಆ ಸಾಲವನ್ನು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ಚೆಕ್ ಅಮಾನ್ಯ ಕುರಿತ ದೂರನ್ನು ವಜಾಗೊಳಿಸಲು ಸಕಾರಣವಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕಾಶ್ ಮಧುಕರರಾವ್ ದೇಸಾಯಿ VS ದತ್ತಾತ್ರೇಯ ಶೇಷರಾವ್ ದೇಸಾಯಿ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಚೆಕ್ ಹೊಂದಿದಾತ ತಾನು ಆರೋಪಿತನಿಗೆ ನೀಡಿದ ಸಾಲವನ್ನು ತನ್ನ ವೈಯಕ್ತಿಕ ದಾಖಲೆ ಯಾ ಆದಾಯ ತೆರಿಗೆ ದಾಖಲೆ (ಐಟಿಆರ್) ಯಲ್ಲಿ ದಾಖಲಿಸಲು ವಿಫಲವಾದರೆ, ಆಗ ಆ ಪ್ರಕರಣವು ವರ್ಗಾವಣೀಯ ಪತ್ರಗಳ ಕಾಯ್ದೆ (ಎನ್‌ಐ ಕಾಯ್ದೆ)ಯ ಸೆಕ್ಷನ್ 138 ರ ಅಡಿಯಲ್ಲಿ ನಿರ್ವಹಣೆಗೆ ಯೋಗ್ಯವಲ್ಲ ಎಂಬ ಕಾರಣಕ್ಕೆ ದೂರನ್ನು ವಜಾಗೊಳಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಚೆಕ್ ಹೋಲ್ಡರ್‌ನ ಖಾತೆ ಯಾ ಆದಾಯ ತೆರಿಗೆ ವರದಿಯಲ್ಲಿ ಸಾಲದ ಬಗ್ಗೆ ಯಾವುದೇ ಉಲ್ಲೇಖವಿಲ್ಲದ ಹಿನ್ನೆಲೆಯಲ್ಲಿ ಅದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 60-SSನ ಉಲ್ಲಂಘನೆಯಾಗಿದೆ. ಆದರೂ ಅದು "ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಾಲ" ಎಂದು ಪರಿಗಣಿಸಬಹುದು ಮತ್ತು ನೆಗೋಶಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ವಿಚಾರಣೆಗೆ ಒಳಪಟ್ಟಿರುತ್ತದೆ ಎಂದು ನ್ಯಾ. ಎ. ಎಸ್. ಚಂದೂರ್ಕರ್ ಮತ್ತು ನ್ಯಾ. ವೃಶಾಲಿ ವಿ. ಜೋಶಿ ಅವರಿದ್ದ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.