ಹಳೆ ಪಿಂಚಣಿ ಯೋಜನೆ: ಕೋರ್ಟಿನ ವೈರುಧ್ಯಮಯ ತೀರ್ಪುಗಳು, ಕೇಂದ್ರದ ನಿಲುವುಗಳು....
ಹಳೆ ಪಿಂಚಣಿ ಯೋಜನೆ: ಕೋರ್ಟಿನ ವೈರುಧ್ಯಮಯ ತೀರ್ಪುಗಳು, ಕೇಂದ್ರದ ನಿಲುವುಗಳು....
ಹಳೆಯ ನಿಶ್ಚಿತ ಪಿಂಚಣಿ ಯೋಜನೆಯ (ಒ.ಪಿ.ಎಸ್.) ಅನುಷ್ಠಾನ ಬಗ್ಗೆ ದೇಶದ ವಿವಿಧ ಹೈಕೋರ್ಟ್ ಗಳು ನೀಡಿದ ವೈರುಧ್ಯಮಯ ತೀರ್ಪುಗಳು. ಒ.ಪಿ.ಎಸ್. ಅನುಷ್ಠಾನದ ಕುರಿತು ಕೇಂದ್ರ ಸರಕಾರದ ನಿಲುವೇನು?*
ಹಳೆಯ ನಿಶ್ಚಿತ ಪಿಂಚಣಿ ಯೋಜನೆ (ಒ.ಪಿ.ಎಸ್.) ಅಡಿ ಪಿಂಚಣಿ ಪಾವತಿ ಮೊತ್ತ ಸರಕಾರಕ್ಕೆ ದೊಡ್ಡ ಹೊರೆಯಾಗುತ್ತಿರುವುದನ್ನು ಪರಿಗಣಿಸಿದ ದೇಶದ ವಿವಿಧ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರವು ಎರಡು ದಶಕಗಳ ಹಿಂದೆ ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್.) ಜಾರಿಗೆ ಒಲವು ತೋರಿಸಲಾರಂಭಿಸಿದವು.
ದೇಶದಲ್ಲೇ ಮೊತ್ತ ಮೊದಲ ಬಾರಿಗೆ ತಮಿಳುನಾಡು ಸರಕಾರವು ದಿನಾಂಕ 1.4.2003 ರಿಂದ ಅನ್ವಯವಾಗುವಂತೆ ತನ್ನ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತು.
ದಿನಾಂಕ 15.5.2003 ರಿಂದ ಹಿಮಾಚಲ ಪ್ರದೇಶ ಸರಕಾರ, ದಿನಾಂಕ 1.1.2004 ರಿಂದ ಕೇಂದ್ರ ಸರಕಾರ ಹಾಗೂ ದಿನಾಂಕ 1.4.2006 ರಿಂದ ಕರ್ನಾಟಕ ರಾಜ್ಯ ಸರಕಾರವು ನೂತನ ಪಿಂಚಣಿ ಯೋಜನೆಯನ್ನು ತನ್ನ ನೌಕರರಿಗೆ ಜಾರಿಗೊಳಿಸಿದವು. ತದನಂತರ ವಿವಿಧ ರಾಜ್ಯ ಸರಕಾರಗಳು ಬೇರೆ ಬೇರೆ ದಿನಾಂಕಗಳಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದವು.
ತ್ರಿಪುರ ರಾಜ್ಯವು ದಿನಾಂಕ 1.7.2018 ರಿಂದ ಅನ್ವಯವಾಗುವಂತೆ ತನ್ನ ನೌಕರರಿಗೆ ಹೊಸ ಪಿಂಚಣಿ ಯೋಜನೆಯ ಜಾರಿಗೊಳಿಸುವ ಮೂಲಕ ಪಶ್ಚಿಮ ಬಂಗಾಳ ಸರಕಾರವನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ ನೂತನ ಪಿಂಚಣಿ ಯೋಜನೆ ಅನುಷ್ಠಾನಗೊಂಡಿತು.
ನಿಶ್ಚಿತ ಪಿಂಚಣಿ ಯೋಜನೆಯಲ್ಲಿ ನೌಕರರ ವೇತನದಿಂದ ಯಾವುದೇ ವಂತಿಗೆ ಪಿಂಚಣಿ ಉದ್ದೇಶಕ್ಕೆ ಕಟಾವಣೆಗೊಳ್ಳುತ್ತಿರಲಿಲ್ಲ. ಆದರೆ ನೂತನ ಪಿಂಚಣಿ ಯೋಜನೆಯಲ್ಲಿ ನೌಕರರ ಮೂಲವೇತನ ಹಾಗೂ ತುಟ್ಟಿ ಭತ್ಯೆಯ ಹತ್ತು ಶೇಕಡ ಮೊತ್ತವನ್ನು ವೇತನದಿಂದ ಕಟಾವಣೆಗೊಳಿಸಲಾಗುತ್ತದೆ. ಸರಕಾರವು ತನ್ನ ವಂತಿಗೆ 14 ಶೇಕಡ ಪಾವತಿಸುತ್ತದೆ.
ನೂತನ ಪಿಂಚಣಿ ಯೋಜನೆ ನೌಕರರಿಗೆ ಆರ್ಥಿಕವಾಗಿ ಹೆಚ್ಚು ಲಾಭದಾಯಕ ಎಂಬುದು ಆ ಯೋಜನೆಯನ್ನು ಸಮರ್ಥಿಸುವವರ ವಾದವಾಗಿದ್ದರೆ ನೂತನ ಪಿಂಚಣಿ ಯೋಜನೆಯು ನೌಕರರ ನಿವೃತ್ತ ಜೀವನಕ್ಕೆ ಯಾವುದೇ ಭದ್ರತೆ ನೀಡುವುದಿಲ್ಲ ಎಂಬುದು ಹಲವಾರು ಸರಕಾರಿ ನೌಕರರ ವಾದವಾಗಿದೆ.
ನೂತನ ಪಿಂಚಣಿ ಯೋಜನೆ ತಮಗೆ ಬೇಡವೆಂದು ಅದು ಅನುಷ್ಠಾನಗೊಂಡ ಸಮಯದಲ್ಲಿಯೇ ವಿರೋಧಿಸಿದ ತಮಿಳುನಾಡು ರಾಜ್ಯದ ಸರಕಾರಿ ನೌಕರರ ಉಗ್ರ ಹೋರಾಟವನ್ನು ಟೆಸ್ಮಾ ಪ್ರಯೋಗಿಸಿ ದಮನಿಸಿದ ಆಗಿನ ಮುಖ್ಯಮಂತ್ರಿ ದಿವಂಗತ ಜಯಲಲಿತ ಅವರು ಸುಮಾರು 1,76,000 ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದ್ದರು.
ಸದರಿ ವಜಾ ಆದೇಶವನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ಸಮರ್ಥಿಸಿ ಸರಕಾರಿ ನೌಕರರಿಗೆ ಮುಷ್ಕರ ಹೂಡುವ ಹಕ್ಕು ಇಲ್ಲ ಎಂಬ ತೀರ್ಪು ನೀಡಿತು. ಅಂತಿಮವಾಗಿ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಮಧ್ಯ ಪ್ರವೇಶಿಸಿದುದರಿಂದ ವಜಾ ಗೊಂಡ ಸರಕಾರಿ ನೌಕರರು ಸೇವೆಗೆ ಮರು ನಿಯುಕ್ತಿಗೊಂಡರು.
ನೂತನ ಪಿಂಚಣಿ ಯೋಜನೆ ಅನುಷ್ಠಾನಗೊಂಡ ಪ್ರಾರಂಭದಲ್ಲಿ ಸದರಿ ಯೋಜನೆಗೆ ಒಳಪಡುವ ನೌಕರರ ಸಂಖ್ಯೆ ಕಡಿಮೆಯಾಗಿದ್ದುದರಿಂದ ವಿಶೇಷವಾದ ವಿರೋಧ ವ್ಯಕ್ತವಾಗಲಿಲ್ಲ. ಆದರೆ ಕ್ರಮೇಣ ಈ ಯೋಜನೆಯಡಿ ಬರುವ ನೌಕರರ ಸಂಖ್ಯೆ ಜಾಸ್ತಿಯಾದಂತೆ ತೀವ್ರ ರೀತಿಯ ಹೋರಾಟಗಳು ದೇಶಾದ್ಯಂತ ಪ್ರಾರಂಭವಾದವು.
ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ನೂತನ ಪಿಂಚಣಿ ಯೋಜನೆಗೊಳಪಟ್ಟ ಸರಕಾರಿ ನೌಕರರು ತಮ್ಮದೇ ಆದ ಪ್ರತ್ಯೇಕ ಸಂಘವನ್ನು ಕಟ್ಟಿಕೊಂಡು ಸರಕಾರವನ್ನು ಆಗ್ರಹಿಸತೊಡಗಿದವು.
ಕೆಲವು ರಾಜ್ಯಗಳಲ್ಲಿ ಸಮಸ್ತ ಸರಕಾರಿ ನೌಕರರನ್ನು ಪ್ರತಿನಿಧಿಸುವ ಬೃಹತ್ ಸಂಘಟನೆಯ ಅಡಿಯಲ್ಲಿ ಹೋರಾಟಗಳು ಪ್ರಾರಂಭವಾದವು. ಏತನ್ಮಧ್ಯೆ ಎನ್ ಪಿ ಎಸ್ ನೌಕರರ ಹೋರಾಟವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕೆಲವು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮುಂದಾದವು.
ನಮ್ಮ ಕರ್ನಾಟಕ ರಾಜ್ಯದಲ್ಲಿ ಎನ್‌ಪಿಎಸ್ ನೌಕರರ ಸಂಘವು ಸಮಸ್ತ ಸರಕಾರಿ ನೌಕರರನ್ನು ಪ್ರತಿನಿಧಿಸುವ ಹಾಗೂ ಸರಕಾರದಿಂದ ಮಾನ್ಯತೆ ಪಡೆದಿರುವ ರಾಜ್ಯ ಸರಕಾರಿ ನೌಕರರ ಸಂಘದೊಡನೆ ಗುರುತಿಸಿಕೊಳ್ಳದೆ ಪ್ರಾರಂಭದಲ್ಲಿಯೇ ಮುನಿಸಿಕೊಂಡು ತನ್ನ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿ, ಬೆಳೆಸಿಕೊಂಡು ಸಚಿವಾಲಯ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಬೆಂಬಲದೊಂದಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂಬ ಹೋರಾಟ ಮುಂದುವರಿಸಿತು.
ಈತನ್ಮಧ್ಯೆ ಕೆಲವು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ವಿಷಯವನ್ನು ಮುಖ್ಯ ಅಂಶವನ್ನಾಗಿ ಕಾಣಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಆಶ್ವಾಸನೆ ನೀಡಿದವು.
ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕೆಂದು ಕೋರಿ ಕೆಲವು ನೌಕರರು ನ್ಯಾಯಾಲಯದ ಮೊರೆ ಹೋದರು. ದೇಶದ ವಿವಿಧ ರಾಜ್ಯಗಳ ಹೈಕೋರ್ಟ್ ಗಳಲ್ಲಿ ದಾಖಲಾದ ರಿಟ್ ಅರ್ಜಿಗಳಲ್ಲಿ ವೈರುಧ್ಯಮಯ ತೀರ್ಪುಗಳು ಘೋಷಿಸಲ್ಪಟ್ಟವು. ಅವುಗಳಲ್ಲಿ ಮುಖ್ಯ ತೀರ್ಪುಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ
*ವಿಹಾರ್ ದೂರ್ವೆ ವಿರುದ್ಧ ಮಹಾರಾಷ್ಟ್ರ ರಾಜ್ಯ ಸರಕಾರ*
ಮಹಾರಾಷ್ಟ್ರ ರಾಜ್ಯದ ನ್ಯಾಯಾಂಗ ಅಧಿಕಾರಿಗಳಿಗೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಿಹಾರ್ ದೂರ್ವೆ ಎಂಬವರು ಮಹಾರಾಷ್ಟ್ರ ರಾಜ್ಯ ಸರಕಾರದ ವಿರುದ್ಧ ಬಾಂಬೆ ಹೈಕೋರ್ಟಿನಲ್ಲಿ ರಿಟ್ ದಾಖಲಿಸಿದರು. ದಿನಾಂಕ 11.08.2017 ರಂದು ರಿಟ್ ಅರ್ಜಿಯನ್ನು ಪುರಸ್ಕರಿಸಿದ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರದ ನ್ಯಾಯಾಂಗ ಅಧಿಕಾರಿಗಳಿಗೆ ನೂತನ ಪಿಂಚಣಿ ಯೋಜನೆಗೆ ಅಥವಾ ಹಳೆಯ ಪಿಂಚಣಿ ಯೋಜನೆಗೆ ಸೇರುವ ಆಯ್ಕೆಯನ್ನು ನೀಡಿತು.
*ಜೋಸೆಫ್ ಜಾಯ್ ಮತ್ತಿತರರು ವಿರುದ್ಧ ತಮಿಳುನಾಡು ರಾಜ್ಯ ಸರಕಾರ*
ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ತಮಗೆ ಅನುಷ್ಠಾನಗೊಳಿಸಲು ತಮಿಳುನಾಡು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠದಲ್ಲಿ ಆ ರಾಜ್ಯದ ನ್ಯಾಯಾಂಗ ಸೇವೆಯ 10 ಮಂದಿ ನ್ಯಾಯಾಂಗ ಅಧಿಕಾರಿಗಳು ರಿಟ್ ಅರ್ಜಿಯನ್ನು ಸಲ್ಲಿಸಿದರು. ಮದ್ರಾಸ್ ಹೈಕೋರ್ಟಿನ ಮಧುರೈ ಪೀಠವು ಬಾಂಬೆ ಹೈಕೋರ್ಟಿನ ತೀರ್ಪಿಗೆ ತದ್ವಿರುದ್ಧವಾಗಿ ತೀರ್ಪು ನೀಡಿತು. ನ್ಯಾಯಾಂಗ ಅಧಿಕಾರಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂಬ ತೀರ್ಪನ್ನು ದಿನಾಂಕ 27.4.2018 ರಂದು ಘೋಷಿಸಿತು.
*ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ ವಿರುದ್ಧ ಕರ್ನಾಟಕ ರಾಜ್ಯ*
ಈ ಪ್ರಕರಣದಲ್ಲಿ ದಿನಾಂಕ 28.11.2019 ರಂದು ಮಾನ್ಯ ಕರ್ನಾಟಕ ಹೈಕೋರ್ಟ್ ನೂತನ ಪಿಂಚಣಿ ಯೋಜನೆಯು ರಾಜ್ಯದ ನ್ಯಾಯಾಂಗ ಅಧಿಕಾರಿಗಳಿಗೆ ಕಡ್ಡಾಯವಲ್ಲ, ಐಚ್ಚಿಕವಾಗಿದೆ ಎಂಬ ಮಹತ್ವದ ತೀರ್ಪನ್ನು ನೀಡಿತು.
*ವಿ.ಜೀವ ವಿರುದ್ಧ ತಮಿಳುನಾಡು ರಾಜ್ಯ*
ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟಿನ ವಿಭಾಗಿಯ ಪೀಠವು ನೂತನ ಪಿಂಚಣಿ ಯೋಜನೆಯ ಅನುಷ್ಠಾನವನ್ನು ಸಮರ್ಥಿಸಿ ಸರಕಾರದ ಪರವಾಗಿ ತೀರ್ಪು ನೀಡಿತು.
ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಕೋರಿ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ದೇಶದ ವಿವಿಧ ಹೈಕೋರ್ಟ್ ಗಳು ನೀಡಿದ ವೈರುಧ್ಯಮಯ ತೀರ್ಪುಗಳ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ದಾಖಲಾಗಿದ್ದು ವಿಚಾರಣೆಯಲ್ಲಿ ಬಾಕಿ ಇದೆ.
ಹಳೆಯ ನಿಶ್ಚಿತ ಪಿಂಚಣಿ ಯೋಜನೆಯ ಅನುಷ್ಠಾನದ ಕುರಿತು ಕೇಂದ್ರ ಸರಕಾರದ ನಿಲುವೇನು?
ದಿನಾಂಕ 12.12.2022 ರಂದು ಸಂಸದ ಶ್ರೀ ಅಸಾದುದ್ದೀನ್ ಓವೈಸಿ ಅವರು ನೂತನ ಪಿಂಚಣಿ ಯೋಜನೆ ಅನುಷ್ಠಾನದ ಕುರಿತು ಕೇಂದ್ರದ ವಿತ್ತ ಸಚಿವರ ಉತ್ತರವನ್ನು ಬಯಸಿ ಈ ಕೆಳಗಿನ ಚುಕ್ಕೆ ಗುರುತಿಲ್ಲದ ಲಿಖಿತ ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಿರುತ್ತಾರೆ.
1.ಭಾರತದ ಯಾವ ಯಾವ ರಾಜ್ಯಗಳಲ್ಲಿ ರಾಜ್ಯ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ?
ಜಾರಿಗೊಳಿಸಿದ್ದಲ್ಲಿ ವಿವರಗಳನ್ನು ಒದಗಿಸುವುದು
2.ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಲುವಾಗಿ ನೂತನ ಪಿಂಚಣಿ ಯೋಜನೆಯ ಹಣವನ್ನು ಮರುಪಾವತಿ ಮಾಡಲು ಯಾವ ಯಾವ ರಾಜ್ಯಗಳು ಕೋರಿಕೆ ಸಲ್ಲಿಸಿವೆ?
3. ಹಾಗಿದ್ದಲ್ಲಿ ವಿವರಗಳನ್ನು ಒದಗಿಸುವುದು ಮತ್ತು ಆ ಕುರಿತು ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ತಿಳಿಸುವುದು
4. ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ ರಾಜ್ಯಗಳಿಗೆ ನೂತನ ಪಿಂಚಣಿ ಯೋಜನೆಯ ಹಣವನ್ನು ಮರಳಿಸುವ ಬಗ್ಗೆ ಕೇಂದ್ರ ಸರಕಾರವು ತೆಗೆದುಕೊಂಡ ತೀರ್ಮಾನವೇನು?
5.ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದೆ ಇದೆಯೇ? ಹಾಗಿದ್ದಲ್ಲಿ ವಿವರಗಳನ್ನು ಒದಗಿಸುವುದು.
ಮೇಲ್ಕಾಣಿಸಿದ ಪ್ರಶ್ನೆಗಳನ್ನು ಕ್ರೋಢೀಕರಿಸಿ ಕೇಂದ್ರ ಸರಕಾರದ ವಿತ್ತ ಖಾತೆಯ ರಾಜ್ಯ ಸಚಿವರಾದ ಡಾ. ಭಗವತ್ ಕರಾಡ್ ರವರು ಈ ಕೆಳಗಿನಂತೆ ಉತ್ತರ ನೀಡಿರುತ್ತಾರೆ.
ರಾಜಸ್ಥಾನ, ಛತ್ತೀಸ್ಗಡ್ ಮತ್ತು ಜಾರ್ಖಂಡ್ ಈ ಮೂರು ರಾಜ್ಯ ಸರಕಾರಗಳು ತಮ್ಮ ರಾಜ್ಯದ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ತೀರ್ಮಾನ ಕೈಗೊಂಡಿರುವ ವಿಷಯವನ್ನು ಕೇಂದ್ರ ಸರಕಾರ/ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (PFRDA) ತಿಳಿಸಿರುತ್ತಾರೆ. ಪಂಜಾಬ್ ರಾಜ್ಯ ಸರಕಾರ ನೂತನ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಟ್ಟ ತಮ್ಮ ರಾಜ್ಯದ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಜಾರಿಗೊಳಿಸುವ ಕುರಿತು ದಿನಾಂಕ 18.11.2022 ರಂದು ಅಧಿಸೂಚನೆ ಹೊರಡಿಸಿದೆ.
ರಾಜಸ್ಥಾನ್, ಛತ್ತೀಸ್ಗಢ ಮತ್ತು ಜಾರ್ಖಂಡ್ ಈ ಮೂರು ರಾಜ್ಯಗಳ ಸರಕಾರಗಳು ಹಳೆಯ ಪಿಂಚಣಿ ಯೋಜನೆಯಲ್ಲಿ ಸಂಗ್ರಹವಾದ ಉದ್ಯೋಗಿಗಳ ವಂತಿಗೆಯ ಹಣ ಮತ್ತು ಸರಕಾರದ ವಂತಿಗೆಯ ಹಣವನ್ನು ತಮಗೆ ಮರಳಿಸಬೇಕೆಂಬ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ/ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (PFRDA)ಕಳುಹಿಸಿರುತ್ತಾರೆ. ಆದರೆ ಪಂಜಾಬ್ ರಾಜ್ಯದಿಂದ ಅಂತಹ ಪ್ರಸ್ತಾವನೆ ಬಂದಿರುವುದಿಲ್ಲ.
ನೂತನ ಪಿಂಚಣಿ ಯೋಜನೆ ಅಡಿ ಈಗಾಗಲೇ ಠೇವಣಿಯಾಗಿರುವ ಉದ್ಯೋಗಿಗಳ ವಂತಿಗೆ ಹಾಗೂ ಸರಕಾರದ ವಂತಿಗೆಯನ್ನು ರಾಜ್ಯ ಸರಕಾರಕ್ಕೆ ಮರಳಿಸಲು ಪಿಎಫ್ಆರ್ ಡಿಎ ಕಾಯ್ದೆ 2013 ಮತ್ತು ಪಿಎಫ್ಆರ್‌ಡಿಎ (ನೂತನ ಪಿಂಚಣಿ ಯೋಜನೆ ಅಡಿ ಹಣ ಹಿಂತೆಗೆತ) ನಿಯಂತ್ರಣಗಳು 2015 ರಡಿ ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ಇತರ ನಿಯಮಗಳಡಿ ಅವಕಾಶವಿಲ್ಲ ಎಂಬ ಸಂಗತಿಯನ್ನು ರಾಜಸ್ಥಾನ, ಛತ್ತೀಸ್ಗಡ ಮತ್ತು ಜಾರ್ಖಂಡ್ ರಾಜ್ಯಗಳಿಗೆ ತಿಳಿಸಲಾಗಿದೆ.
ಹಳೆಯ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವ ಯಾವುದೇ ಪ್ರಸ್ತಾಪನೆ ಕೇಂದ್ರ ಸರಕಾರದ ಮುಂದೆ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ.
PFRDA ಕಾಯ್ದೆ ಅಡಿ ನೌಕರರ ವಂತಿಗೆ ಹಾಗೂ ಸರಕಾರದ ವಂತಿಗೆಯ ಹಣವನ್ನು ಈಗಾಗಲೇ ಹೂಡಿಕೆ ಮಾಡಿರುವುದರಿಂದ ಅವಧಿಪೂರ್ವ ಹಿಂತೆಗೆತಕ್ಕೆ PFRDA ನಿಯಮಗಳಲ್ಲಿ ಅವಕಾಶವಿಲ್ಲ ಎಂಬುದು ಹಳೆಯ ಪಿಂಚಣಿ ಪದ್ಧತಿಯನ್ನು ಈಗಾಗಲೇ ಜಾರಿಗೊಳಿಸಿದ ರಾಜ್ಯ ಸರಕಾರಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಅಲ್ಲದೆ ಈ ಕುರಿತು ರಾಜ್ಯಗಳು ಮಾಡಿರುವ ಒಪ್ಪಂದ ಪ್ರಕಾರ ಯಾವುದೇ ವಿವಾದಗಳನ್ನು ಅರ್ಬಿಟೇಶನ್ ಮೂಲಕ ಇತ್ಯರ್ಥ ಪಡಿಸಬೇಕೇ ಹೊರತು ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿಲ್ಲ. ಹಳೆಯ ಪಿಂಚಣಿ ಯೋಜನೆಯನ್ನು ಮರು ಅಳವಡಿಸಿಕೊಂಡಿರುವ ರಾಜ್ಯಗಳ ಆರ್ಥಿಕ ಪರಿಸ್ಥಿತಿಯಂತೂ ಹೀನಾಯವಾಗಿದೆ.
ಕಾಯಿದೆ ಪಿಎಫ್ಆರ್ ಡಿಎ ತಿದ್ದುಪಡಿಯಾಗಬೇಕಾದರೆ ಸಂಸತ್ತಿನಲ್ಲಿ ಮಂಡಿಸಿ ಬಹುಮತದೊಂದಿಗೆ ಅಂಗೀಕರಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವು ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಮುಂದುವರಿಸುವ ಕುರಿತು ತನ್ನ ಒಲವನ್ನು ತೋರ್ಪಡಿಸಿರುವುದು ಕಂಡುಬರುತ್ತದೆ. ಅಲ್ಲದೆ ಕೇಂದ್ರ ಸರಕಾರವು ನೂತನ ಪಿಂಚಣಿ ಯೋಜನೆಯನ್ನು ಆಕರ್ಷಕವಾಗಿರಿಸಲು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ.
ಸೇವೆಯಲ್ಲಿರುವಾಗಲೇ ಮೃತನಾದ ಎನ್‌ಪಿಎಸ್ ನೌಕರನಿಗೆ ಓಪಿಎಸ್ ಯೋಜನೆಯಡಿ ಸಿಗುವ ಎಲ್ಲಾ ಸವಲತ್ತುಗಳನ್ನು ನೀಡಲು ಕೇಂದ್ರ ಸರಕಾರ ಆದೇಶಿಸಿದೆ. ನೌಕರರಿಗೆ ನಿವೃತ್ತಿ ಸಂದರ್ಭದಲ್ಲಿ ಅವರು ಪಡೆಯುತ್ತಿದ್ದ ಅಂತಿಮ ವೇತನದ ಅರ್ಧಾಂಶವನ್ನು ಪಿಂಚಣಿ ರೂಪದಲ್ಲಿ ನೀಡುವ ಪ್ರಸ್ತಾವನೆ ಕೇಂದ್ರ ಸರಕಾರದ ಪರಿಶೀಲನೆಯಲ್ಲಿದೆ.
PFRDA ಕಾಯಿದೆ ತಿದ್ದುಪಡಿ ಆಗದೆ ನೌಕರರಿಗೆ ಯಾವುದೇ ಆರ್ಥಿಕ ಲಾಭ ದೊರೆಯದು. ಈ ಅನಿಶ್ಚಿತತೆ ಕೊನೆಗೊಳ್ಳದಿದ್ದರೆ ನೂತನ ಪಿಂಚಣಿ ಯೋಜನೆಯ ವಿರೋಧಿ ಹೋರಾಟವು ನೀರ ಮೇಲಿನ ಹೋಮದಂತೆ, ಪಂಚಾಂಗವಿಲ್ಲದ ಕಟ್ಟಡದ ಸ್ಥಿತಿಯಂತೆ ಆಗುವುದು ನಿಶ್ಚಿತ.
*✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಲಯ ಸಂಕೀರ್ಣ, ಮಂಗಳೂರು