![ಪೋಕ್ಸೊ: ಸ್ಪಷ್ಟ ಮಾರ್ಗಸೂಚಿ ರಚನೆ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿ! ಪೋಕ್ಸೊ: ಸ್ಪಷ್ಟ ಮಾರ್ಗಸೂಚಿ ರಚನೆ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿ!](https://blogger.googleusercontent.com/img/b/R29vZ2xl/AVvXsEgppv8G_51QfHs9XS85FLFlaVGu3WtK-sfYDtjzt5WA21N6WxwYX9otv0bLkapYOEame8T-1MXfz_XJIuuF0paMbafVq3TT0IhQYvldqgCVASd397VlVWua4dzbjy41F6NcvHGPe-2KW2uK2b_ie3X3yeTlZEnuBL7O-9fQ59fvntoIt45O3lnhaEDXPlW3/w640-h402/Legal%20Image-1.jpg)
ಪೋಕ್ಸೊ: ಸ್ಪಷ್ಟ ಮಾರ್ಗಸೂಚಿ ರಚನೆ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿ!
ಪೋಕ್ಸೊ: ಸ್ಪಷ್ಟ ಮಾರ್ಗಸೂಚಿ ರಚನೆ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿ!
ಪೋಕ್ಸೋ ಕಾಯ್ದೆಯಡಿ ಸಮರ್ಪಕ ಹಾಗೂ ಪರಿಣಾಮಕಾರಿ ಮಾರ್ಗಸೂಚಿಗಳನ್ನು ರಚಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಪೋಕ್ಸೋ ಪ್ರಕರಣದ ಸಂತ್ರಸ್ಥ ಮಕ್ಕಳು ತನಿಖೆ, ವಿಚಾರಣೆ ಮತ್ತು ಪುನರ್ವಸತಿ ಸಂದರ್ಭದಲ್ಲಿ ಅನುಭವಿಸುವ ಯಾತನೆ ಕಡಿಮೆ ಮಾಡಲು ಸಂರಕ್ಷಕರ ನೇಮಕ ಮಾಡುವ ವಿಚಾರದಲ್ಲಿ ಸ್ಪಷ್ಟತೆ ಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಸರ್ಕಾರೇತರ ಸಂಸ್ಥೆ "ಬಚಪನ್ ಬಚಾವೋ ಆಂದೋಲನ" ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್. ರವೀಂದ್ರ ಭಟ್ ಮತ್ತು ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಮಾರ್ಗಸೂಚಿಗಳನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 6ರ ಒಳಗಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ ಅಕ್ಟೋಬರ್ 6ಕ್ಕೆ ಮುಂದೂಡಿತು.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದಾಗ ಇಲ್ಲವೇ ಶಿಕ್ಷಣ ಪ್ರಮಾಣ ಹೆಚ್ಚಿಸಿದರೆ ಮಾತ್ರ ನಿಜವಾದ ನ್ಯಾಯ ನೀಡಿದಂತೆ ಆಗುವುದಿಲ್ಲ. ರಾಜ್ಯ ಸರ್ಕಾರಗಳು ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ಸಂತ್ರಸ್ತರಿಗೆ ಬೆಂಬಲ, ಭದ್ರತೆಯನ್ನು ಖಾತ್ರಿಪಡಿಸುವುದು ಅಷ್ಟೇ ಮುಖ್ಯ ಎಂದು ನ್ಯಾಯಪೀಠ ಹೇಳಿತು.
ಕೇವಲ ತಮ್ಮ ಮೇಲೆ ನಡೆಯುವ ದೌರ್ಜನ್ಯ ಮಾತ್ರ ಮಕ್ಕಳಲ್ಲಿ ಭೀತಿ, ಅಭದ್ರತೆ ಹುಟ್ಟಿಸುವುದಿಲ್ಲ. ಪ್ರಕರಣ ದಾಖಲಾದ ನಂತರದ ದಿನಗಳಲ್ಲಿ ದೊರೆಯುವ / ದೊರೆಯಬೇಕಾದ ಬೆಂಬಲದ ಕೊರತೆ ಅವರಲ್ಲಿ ನೋವು, ದುಃಖ ಹೆಚ್ಚುವಂತೆ ಮಾಡುತ್ತದೆ.
ಇದರಲ್ಲಿ ಸಂರಕ್ಷಕರ ಪಾತ್ರ ಮಹತ್ವದ್ದು. ಸಂತ್ರಸ್ತರಿಗೆ ಪುನರ್ವಸತಿ, ಮಾನಸಿಕ ಬೆಂಬಲ, ನೈತಿಕ ಶಕ್ತಿ ಮೂಡಿಸುವ ಆಪ್ತತೆ ಇದೆಲ್ಲವೂ ಸಂತ್ರಸ್ತರ ಬಾಳಿಗೆ ಪೂರಕವಾಗಿರಬೇಕು ಎಂಬುದನ್ನು ನ್ಯಾಯಪೀಠ ಗಮನಿಸಿತು.