ಮೋದಿ ಉಪನಾಮ ಹೇಳಿಕೆ: ಸುಪ್ರೀಂನಲ್ಲಿ ರಾಹುಲ್ ಗಾಂಧಿ ನೀಡಿದ ಸಮರ್ಥನೆ ಇದು..!
ಮೋದಿ ಉಪನಾಮ ಹೇಳಿಕೆ: ಸುಪ್ರೀಂನಲ್ಲಿ ರಾಹುಲ್ ಗಾಂಧಿ ನೀಡಿದ ಸಮರ್ಥನೆ ಇದು..!
ಎಲ್ಲ ಕಳ್ಳರಿಗೂ ಮೋದಿ ಉಪನಾಮ ಇದೆ ಎಂಬ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ. ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅಫಿಡವಿಟ್‌ನ್ನು ಸಲ್ಲಿಸಿದ್ದಾರೆ.
ತಮ್ಮ ಹೇಳಿಕೆಗೆ ವಿಷಾದವಿಲ್ಲ, ತಾನು ಕ್ಷಮೆ ಯಾಚಿಸುವುದಿಲ್ಲ. ಒಂದು ವೇಳೆ, ಆ ರೀತಿ ಮಾಡುವಂತಿದ್ದರೆ ಈ ಮೊದಲೇ ಮಾಡುತ್ತಿದ್ದೆ ಎಂದು ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ.
ಮೋದಿ ಎಂಬ ಹೆಸರಿನಲ್ಲಿ ಯಾವುದೇ ಸಮಾಜ ಅಸ್ತಿತ್ವದಲ್ಲಿ ಇಲ್ಲ. ಅದಕ್ಕೆ ಯಾವುದೇ ಪುರಾವೆಗಳೂ ಇಲ್ಲ. ಹೀಗಾಗಿ ಮೋದಿ ಸಮುದಾಯವನ್ನೇ ದೂಷಿಸಲಾಗಿದೆ ಎಂಬುದಾಗಿ ಆರೋಪ ಮಾಡಲಾಗದು. ಮೋದಿ ಎಂಬ ಉಪನಾಮ ಇರುವ ವ್ಯಕ್ತಿಗಳು ಹಲವು ಸಮುದಾಯ, ಜಾತಿಗಳಲ್ಲಿ ಇದ್ದಾರೆ ಎಂಬುದಾಗಿ ರಾಹುಲ್ ಪರ ವಕೀಲರು ವಾದಿಸಿದ್ದಾರೆ.
ತಾನು ಮಾಡದೇ ಇರುವ ತಪ್ಪಿಗೆ ತಮ್ಮ ಮೇಲೆ ಕಾನೂನಿನ ಬಲಪ್ರಯೋಗ ಮಾಡುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗಿದೆ. ಇದಕ್ಕೆ ಕ್ರಿಮಿನಲ್ ಮೊಕದ್ದಮೆ ಮತ್ತು ಜನಪ್ರತಿನಿಧಿ ಕಾಯ್ದೆಯನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ವಾದಿಸಿದ್ದಾರೆ.
ಪ್ರಕರಣದ ದೂರುದಾರ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮರುತ್ತರ ಅಫಿದಾವಿತ್‌ಗೆ ಪ್ರತಿಯಾಗಿ ರಾಹುಲ್ ಗಾಂಧಿ ಈ ಅಫಿದಾವಿತ್‌ನ್ನು ಸಲ್ಲಿಸಿದ್ದಾರೆ.
ತಾವು ಅಫಿದಾವಿತ್‌ನಲ್ಲಿ ಹೇಳಿರುವ ಕಾರಣಗಳಿಂದ ತಮ್ಮ ಹೇಳಿಕೆ ವಿರುದ್ಧ ಹೂಡಲಾದ ಮಾನನಷ್ಟ ಮೊಕದ್ದಮೆಯಲ್ಲಿ ತಾನು ದೋಷಿ ಅಲ್ಲ ಎಂದು ರಾಹುಲ್ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.