ಬ್ಯಾಂಕಿನಿಂದ ಸಾಲ ಪಡೆದು ತೀರಿಸದ ಹಿರಿಯ ವಕೀಲರಿಗೆ ಕರ್ನಾಟಕ ಹೈಕೋರ್ಟ್ ಛೀಮಾರಿ
ಬ್ಯಾಂಕಿನಿಂದ ಸಾಲ ಪಡೆದು ತೀರಿಸದ ಹಿರಿಯ ವಕೀಲರಿಗೆ ಕರ್ನಾಟಕ ಹೈಕೋರ್ಟ್ ಛೀಮಾರಿ
ಬ್ಯಾಂಕಿನಿಂದ ಒಂದೂವರೆ ಕೋಟಿ ಸಾಲ ಪಡೆದು ವಂಚಿಸಿದ್ದ ಹಿರಿಯ ವಕೀಲರಿಗೆ ಕರ್ನಾಟಕ ಹೈಕೋರ್ಟ್ ಛೀಮಾರಿ ಹಾಕಿದೆ.
ಸಾಲ ಪಡೆದು ತೀರಿಸದೇ ಇದ್ದರೆ ಆತ ಸಾಲಗಾರನೇ. ಆತ ವೃತ್ತಿಯಲ್ಲಿ ವಕೀಲನಿರಲಿ.. ಇಲ್ಲವೇ ನ್ಯಾಯಾಧೀಶರೇ ಇರಲಿ.. ಇದಕ್ಕೆ ಭೇದ ಇರುವುದಿಲ್ಲ. ಬೇರೆ ಆಸ್ತಿಗಳನ್ನು ಹೊಂದಿದ್ದರೂ ದಿವಾಳಿತನ ಎಂದು ಹೇಳಿ ಸಾಲದಿಂದ ಪಾರಾಗಲು ಸಾಧ್ಯವಿಲ್ಲ ಎಂದು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ತೀರ್ಪು ನೀಡಿದೆ.
ಬೆಂಗಳೂರಿನ ಹಿರಿಯ ವಕೀಲರಾದ ರವೀಂದ್ರನಾಥ್ ಕಾಮತ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಆರೋಪಿ ವಕೀಲರಿಗೆ ಸಂಬಂಧಪಟ್ಟ ಆಸ್ತಿಯನ್ನು ಮಾರಾಟ ಮಾಡಿ ಸಾಲದ ಹಣವನ್ನು ತುಂಬಿಸಿಕೊಳ್ಳಲು ಬ್ಯಾಂಕಿಗೆ ಅವಕಾಶ ನೀಡಿತು. ಹಾಗೂ ವಕೀಲರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿತು.
ರವೀಂದ್ರನಾಥ್ ಕಾಮತ್ Vs ಸುಬ್ರಹ್ಮಣ್ಯೇಶ್ವರ ಕೋ ಅಪರೇಟಿವ್ ಬ್ಯಾಂಕ್ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ.
2017ರಲ್ಲಿ ಬೆಂಗಳೂರಿನ ಹಿರಿಯ ವಕೀಲರಾಗಿರುವ ರವೀಂದ್ರನಾಥ್ ಕಾಮತ್ ಅವರು ಸುಬ್ರಹ್ಮಣ್ಯೇಶ್ವರ ಕೋ ಅಪರೇಟಿವ್ ಬ್ಯಾಂಕಿನಿಂದ 1.5 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಐದು ವರ್ಷಗಳಲ್ಲಿ ತಿಂಗಳಿಗೆ 2.37 ಲಕ್ಷ ರೂ.ಗಳ ಕಂತಿನಂತೆ ಶೇ. 14.5 ಬಡ್ಡಿ ದರದಲ್ಲಿ ಸಾಲದ ಮರುಪಾವತಿ ಮಾಡಲು ಒಪ್ಪಂದ ಆಗಿತ್ತು.
ಆದರೆ, ರವೀಂದ್ರನಾಥ್ ಕಾಮತ್ ಅವರು ಸಾಲ ಪಡೆದ ಬಳಿಕ ಹಣ ಮರುಪಾವತಿ ಮಾಡಿರಲಿಲ್ಲ. ಈ ಮೂಲಕ ಬ್ಯಾಂಕಿಗೆ ವಂಚಿಸಿದ್ದಾರೆ ಎಂದು ಬ್ಯಾಂಕಿನ ಜನರಲ್ ಮ್ಯಾನೇಜರ್ ಬೆಂಗಳೂರಿನ ಸ್ಥಳೀಯ ಕೋರ್ಟಿನಲ್ಲಿ ದಾವೆ ಹೂಡಿದ್ದರು.
ಅದರಂತೆ, ಸ್ಥಳೀಯ ಕೋರ್ಟ್ ಸಾಲಗಾರನ ಆಸ್ತಿ ಜಪ್ತಿಪಡಿಸಿ ಸಾಲದ ಮೊತ್ತವನ್ನು ತುಂಬಿಸಿಕೊಳ್ಳಲು 2021ರಲ್ಲಿ ಆದೇಶ ಮಾಡಿತ್ತು. ಸ್ಥಳೀಯ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ರವೀಂದ್ರ ನಾಥ್ ಕಾಮತ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಕೋವಿಡ್ ಲಾಕ್‌ಡೌನ್ ಕಾರಣದಿಂದ ನಷ್ಟಗೊಂಡು ಸಾಲ ತೀರಿಸಲು ಕಷ್ಟವಾಗಿತ್ತು ಎಂದು ಹೇಳಿದ್ದಲ್ಲದೆ, ಪ್ರತಿ ಬಾರಿ ವಿಚಾರಣೆ ಸಂದರ್ಭದಲ್ಲಿ ಸಾಲದ ಹಣ ಕಟ್ಟುವುದಾಗಿ ಹೇಳಿ ವಕೀಲರು ಗಡುವು ಹೇಳಿಕೊಂಡು ಬಂದಿದ್ದರು. ಈ ನಡುವೆ 62 ಲಕ್ಷ ರೂ. ಹಣವನ್ನು ಬ್ಯಾಂಕಿಗೆ ಕಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು.
ಸತತ ಮನವಿ ಹಾಗೂ ಗಡುವು ನೀಡಿದ ಬಳಿಕ ಮಾರ್ಚ್ ತಿಂಗಳಿನಲ್ಲಿ ಹೈಕೋರ್ಟ್ 25 ಲಕ್ಷ ರೂ. ಡಿಪಾಸಿಟ್ ಮಾಡುವಂತೆ ಹೇಳಿದ್ದಲ್ಲದೆ, 70 ಲಕ್ಷ ರೂ. ಹಣವನ್ನು ಕೋರ್ಟಿನ ಮೂಲಕ ಜಮಾ ಮಾಡುವ ಬಗ್ಗೆ ಸೂಚಿಸಿತ್ತು. ಆದರೆ, ಕೋರ್ಟ್ ಆದೇಶವನ್ನು ಪಾಲಿಸದೆ ರವೀಂದ್ರನಾಥ್ ಕಾಮತ್ ನಿರ್ಲಕ್ಷ್ಯ ಮಾಡಿದ್ದರು.
ಆರೋಪಿ ವಕೀಲರು ಕೊಡಗು ಹಾಗೂ ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವ ಬಗ್ಗೆ ಬ್ಯಾಂಕ್ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಬ್ಯಾಂಕ್‌ನದ್ದು ಸಾರ್ವಜನಿಕ ಆಸ್ತಿಯಾಗಿದ್ದು, ಅದನ್ನು ಕಟ್ಟಿಸಿಕೊಳ್ಳದೆ ಬೇರೆ ಗತಿಯಿಲ್ಲ ಎಂದು ವಾದಿಸಿದ್ದರು.
ಕಳೆದ ಜುಲೈ ಒಳಗೆ ನಿಗದಿಪಡಿಸಿದ ಹಣವನ್ನು ಪಾವತಿ ಮಾಡದೆ ಇದ್ದಲ್ಲಿ ಆಸ್ತಿ ಜಪ್ತಿ ಮಾಡುವ ಬಗ್ಗೆ ಹೈಕೋರ್ಟ್ ಸೂಚಿಸಿತ್ತು. ಆದರೆ, ಬ್ಯಾಂಕಿನವರು 70 ಲಕ್ಷ ಹಣದ ಜೊತೆಗೆ 12 ಲಕ್ಷ GST ಇನ್ನಿತರ ತೆರಿಗೆ ಪಾವತಿಸುವಂತೆ ಕೇಳಿಕೊಂಡಿದ್ದರು. ಹೀಗಾಗಿ ಹಣ ಪಾವತಿ ಮಾಡಿರಲಿಲ್ಲ.
ಕೋರ್ಟ್ ಸತತ ಮನವಿಯ ಹೊರತಾಗಿಯೂ ಆರೋಪಿ ವಕೀಲರು ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಬ್ಯಾಂಕಿಗೆ ಇರುವ ಎಲ್ಲ ಅವಕಾಶಗಳನ್ನು ಮುಕ್ತವಾಗಿಸುವುದಾಗಿ ಹೇಳಿದ್ದಲ್ಲದೆ, ಸಾಲಗಾರನ ಮೇಲೆ ಯಾವುದೇ ರಿಯಾಯಿತಿ ತೋರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
Courtesy: headlineskarnataka.com