ಕರ್ತವ್ಯ ಲೋಪದ ಗಂಭೀರ ಪ್ರಮಾದ: ಸೆಷನ್ಸ್ ನ್ಯಾಯಾಧೀಶರ ಅಮಾನತು- ಹೈಕೋರ್ಟ್ ಆದೇಶ
ಕರ್ತವ್ಯ ಲೋಪದ ಗಂಭೀರ ಪ್ರಮಾದ: ಸೆಷನ್ಸ್ ನ್ಯಾಯಾಧೀಶರ ಅಮಾನತು- ಹೈಕೋರ್ಟ್ ಆದೇಶ
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಿದ್ದ ಸೆಷನ್ಸ್ ನ್ಯಾಯಾಧೀಶರನ್ನು ತೆಲಂಗಾಣ ಹೈಕೋರ್ಟ್ ಅಮಾನತು ಮಾಡಿದೆ.
ತೆಲಂಗಾಣದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಸೆಷನ್ಸ್ ಕೋರ್ಟ್) ನ್ಯಾಯಾಧೀಶ ಕೆ. ಜಯಕುಮಾರ್ ಅಮಾನತು ಆದವರು.
ಚುನಾವಣೆಯ ಸಮಯದಲ್ಲಿ ಸಲ್ಲಿಸಿದ ಪ್ರಮಾಣಪತ್ರ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ನ್ಯಾಯಾಧೀಶರಾದ ಜಯಕುಮಾರ್ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಿದ್ದರು.
ರಾಘವೇಂದ್ರ ರಾಜು ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸೆಷನ್ಸ್ ನ್ಯಾಯಧೀಶರಾದ ಜಯಕುಮಾರ್, ಪ್ರಾಥಮಿಕ ವಿಚಾರಣೆ ನಡೆಸದೆ ಹಾಗೂ ದೂರುದಾರರ ಹೇಳಿಕೆಯನ್ನು ದಾಖಲಿಸದೇ ಸಿಇಸಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದರು.
ಇದನ್ನು ಗಂಭೀರವಾಗಿ ಗಮನಿಸಿದ ಹೈಕೋರ್ಟ್, ನ್ಯಾಯಾಧೀಶ ಜಯಕುಮಾರ್ ಅವರು ಈ ವಿಷಯದಲ್ಲಿ ಆತುರ ಹಾಗೂ ಅನಗತ್ಯ ಅವಸರ ತೋರಿದ್ದಾರೆ ಎಂದು ಛೀಮಾರಿ ಹಾಕಿದೆ.
ಕರ್ತವ್ಯ ನಿರ್ವಹಣೆಯ ವಿಚಾರದಲ್ಲಿ ಇದು ನ್ಯಾಯಾಧೀಶರಿಂದ ಆದ ಗಂಭೀರ ಲೋಪವಾಗಿದೆ. ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ತೆಲಂಗಾಣ ಅಬಕಾರಿ ಸಚಿವ ವಿ. ಶ್ರೀನಿವಾಸ ಗೌಡ ಅವರು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀನಿವಾಸ ಗೌಡ, ಸಿಇಸಿ ರಾಜೀವ್ ಕುಮಾರ್ ಹಾಗೂ ಇತರರ ವಿರುದ್ಧ ಆಗಸ್ಟ್ 11ರಂದು ಎಫ್‌ಐಆರ್ ದಾಖಲಿಸಲಾಗಿತ್ತು.