ಸರ್ಕಾರಿ ನೌಕರರಿಗೆ ಸಮನ್ಸ್: ಸುಪ್ರೀಂಕೋರ್ಟ್ ನೂತನ ಮಾರ್ಗಸೂಚಿ
ಸರ್ಕಾರಿ ನೌಕರರಿಗೆ ಸಮನ್ಸ್: ಸುಪ್ರೀಂಕೋರ್ಟ್ ನೂತನ ಮಾರ್ಗಸೂಚಿ
ಸರ್ಕಾರಿ ನೌಕರರಿಗೆ ಕೋರ್ಟ್ ಸಮನ್ಸ್ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಹೊಸ ಮಾರ್ಗಸೂಚಿ ಸಿದ್ಧಪಡಿಸುವುದಾಗಿ ಹೇಳಿದೆ. ದೇಶಾದ್ಯಂತ ನ್ಯಾಯಾಲಯಗಳು ಇನ್ನು ಸರ್ಕಾರಿ ನೌಕರರಿಗೆ ಈ ಮಾರ್ಗಸೂಚಿ ಪ್ರಕಾರವೇ ಸಮನ್ಸ್ ಜಾರಿಗೊಳಿಸಬೇಕಾಗಿದೆ.
ಸುಪ್ರೀಂ ಕೋರ್ಟ್ ನೀಡಿದ ಅಂತಿಮ ತೀರ್ಪು ಮತ್ತು ಮಧ್ಯಂತರ ಆದೇಶಗಳನ್ನು ಅನುಷ್ಠಾನಗೊಳಿಸದೇ ಹೋದ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣಗಳು ಹಾಗೂ ಬಾಕಿ ಇರುವ ಪ್ರಕರಣಗಳನ್ನು ಬೇರೆ ಬೇರೆ ರೀತಿಯಾಗಿ ನಿಭಾಯಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದೀವಾಲಾ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಹೇಳಿದೆ.
ಬಾಕಿ ಇರುವ ಪ್ರಕರಣಗಳಲ್ಲಿ ಅಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಿದರೆ ಸಾಕು. ಅದನ್ನು ನ್ಯಾಯಾಲಯ ಪರಿಗಣಿಸಬೇಕು. ಆದರೆ, ಅನುಷ್ಠಾನಗೊಳಿಸದ ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿರುವುದು ಅಗತ್ಯ ಎಂದು ನ್ಯಾಯಪೀಠ ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸುವುದನ್ನು ಕಡಿಮೆ ಮಾಡಬೇಕು. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಮಾತ್ರ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಇದರೊಂದಿಗೆ, ಉತ್ತರ ಪ್ರದೇಶದ ಇಬ್ಬರು ಕಾರ್ಯದರ್ಶಿಗಳ ವಿರುದ್ಧ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ್ದ ಸಮನ್ಸ್‌ನ್ನು ರದ್ದುಪಡಿಸಿದೆ.