ವಕೀಲರು ರೀಯಲ್ ಎಸ್ಟೇಟ್ ಏಜೆಂಟರಾದರೆ ವೃತ್ತಿ ದುರ್ವರ್ತನೆ: ಬಿಸಿಐ ದಂಡ ಸಮರ್ಥಿಸಿದ ಸುಪ್ರೀಂ ಕೋರ್ಟ್
ವಕೀಲರು ರೀಯಲ್ ಎಸ್ಟೇಟ್ ಏಜೆಂಟರಾದರೆ ವೃತ್ತಿ ದುರ್ವರ್ತನೆ: ಬಿಸಿಐ ದಂಡ ಸಮರ್ಥಿಸಿದ ಸುಪ್ರೀಂ ಕೋರ್ಟ್
ವಕೀಲರಾಗಿದ್ದುಕೊಂಡು ರೀಯಲ್ ಎಸ್ಟೇಟ್ ಏಜೆಂಟರಾದರೆ ಅದು ವೃತ್ತಿ ದುರ್ನಡತೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಕೃತ್ಯದಲ್ಲಿ ತೊಡಗಿದ್ದ ವಕೀಲರಿಗೆ ದಂಡ ವಿಧಿಸಿ ವಕೀಲರನ್ನು ಐದು ವರ್ಷಗಳ ಕಾಲ ವೃತ್ತಿ ನಡೆಸದಂತೆ ನಿಷೇಧಿಸಿದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕ್ರಮವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ.
ನ್ಯಾ. ಅಭಯ ಶ್ರೀನಿವಾಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ವಕೀಲರೊಬ್ಬರು ತಮ್ಮ ಕಕ್ಷಿದಾರರಿಗೆ ಜನರಲ್ ಪವರ್ ಆಫ್ ಅಟಾರ್ನಿ ಪಡೆದುಕೊಂಡು ಆಸ್ತಿಯ ಮಾರಾಟ ನಡೆಸಿದ್ದರು. ಮತ್ತು ಈ ಮಾರಾಟದಿಂದ ಬಂದ ಹಣದ ಶೇ. 2ರಷ್ಟು ಮೊತ್ತವನ್ನು ಕಮಿಷನ್ ಆಗಿ ಪಡೆದುಕೊಂಡಿದ್ದರು.
ಈ ಬಗ್ಗೆ ವಕೀಲರ ಪರಿಷತ್ತು ನಡೆಸಿದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ ಆರೋಪಿ ವಕೀಲರು ತಾವು ನ್ಯಾಯವಾದಿಯಾಗಿ ಈ ಕೃತ್ಯ ಎಸಗಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕಮಿಷನ್ ಪಡೆದಿರುವುದಾಗಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ವಕೀಲರಿಗೆ ಐದು ವರ್ಷಗಳ ಕಾಲ ವಕೀಲ ವೃತ್ತಿ ನಡೆಸದಂತೆ "ಸನದು"ನ್ನು ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿ ವಕೀಲರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಆರೋಪಿ ವಕೀಲರು ತಮ್ಮ ವೃತ್ತಿಯಲ್ಲಿ ಇದ್ದುಕೊಂಡು ಈ ಕೃತ್ಯ ಎಸಗಿದ್ದಾರೆ. ವೃತ್ತಿ ಜೊತೆಗೆ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ರಿಯಲ್ ಎಸ್ಟೇಟ್ ಏಜೆಂಟ್ ಎಂಬ ನೆಲೆಯಲ್ಲಿ ಕಮಿಷನ್ ಪಡೆದಿರುವುದಾಗಿ ಹೇಳಿಕೊಂಡಿದ್ಧಾರೆ. ಇದು ವೃತ್ತಿ ದುರ್ನಡತೆಯಾಗಿದೆ. ಹಾಗಾಗಿ, ವೃತ್ತಿಯಿಂದ ಐದು ವರ್ಷಗಳ ಕಾಲ ಅಮಾನತು ಮಾಡಿರುವ ಕ್ರಮ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.