ಕೊಲೀಜಿಯಂ ಶಿಫಾರಸ್ಸು- ಕೇಂದ್ರದ ನಿರ್ಲಕ್ಷ್ಯ ಏಕೆ?- ಚಾಟಿ ಬೀಸಿದ ಸುಪ್ರೀಂ ಕೋರ್ಟ್
ಕೊಲೀಜಿಯಂ ಶಿಫಾರಸ್ಸು- ಕೇಂದ್ರದ ನಿರ್ಲಕ್ಷ್ಯ ಏಕೆ?- ಚಾಟಿ ಬೀಸಿದ ಸುಪ್ರೀಂ ಕೋರ್ಟ್
ಕೊಲೀಜಿಯಂ ಶಿಫಾರಸ್ಸುಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವುದು ಕೂಡ ಕೊಲೀಜಿಯಂ ಮಾಡಿದ ಶಿಫಾರಸ್ಸುಗಳಲ್ಲಿ ಒಂದು.
ಮುಖ್ಯ ನ್ಯಾಯಮೂರ್ತಿಗಳ ನೇಮಕ ಬಲು ಸೂಕ್ಷ್ಮ ವಿಚಾರ. ನ್ಯಾ. ಮೃದುಲ್ ಅವರನ್ನು ಮಣಿಪುರ ಸಿಜೆ ಮಾಡುವಂತೆ ಜುಲೈನಲ್ಲಿ ಶಿಫಾರಸ್ಸು ಮಾಡಲಾಗಿದೆ. ಆದರೆ, ನೇಮಕದ ಕುರಿತು ಕೇಂದ್ರ ಸರ್ಕಾರ ಇದುವರೆಗೂ ಅಧಿಸೂಚನೆ ಹೊರಡಿಸಲಿಲ್ಲ ಎಂದು ನ್ಯಾಯಪೀಠ ಗರಂ ಆಯಿತು.
ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆ ವಿಚಾರವಾಗಿ ಮಾಡುವ ಶಿಫಾರಸ್ಸುಗಳಿಗೆ ಕೇಂದ್ರ ಸರ್ಕಾರವು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕಠಿಣ ಶಬ್ಧಗಳಿಂದ ಸುಪ್ರೀಂ ಹೇಳಿದೆ. ಈ ಬಗ್ಗೆ ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹೇಳಿದ್ದಾರೆ.
ಹಲವಷ್ಟು ಸಂಗತಿಗಳನ್ನು ಹೇಳಬೇಕು ಎಂದುಕೊಂಡಿದ್ದೆ. ಆದರೆ, ಅಟಾರ್ನಿ ಜನರಲ್ ಅವರು ಒಂದು ವಾರದ ಕಾಲಾವಕಾಶ ಕೋರಿದ ಕಾರಣ ನನ್ನ ಮಾತುಗಳನ್ನು ತಡೆಹಿಡಿಯುತ್ತಿದ್ದೆನೆ. ಆದರೆ, ಹೆಚ್ಚು ಕಾಲ ಸುಮ್ಮನೆ ಕೂರಲಾಗದು ಎಂದು ನ್ಯಾಯಾಧೀಶರು ಕಿಡಿ ಕಾರಿದರು.
ಪ್ರಕರಣವನ್ನು ಪ್ರತಿ 10 ದಿನಗಳಿಗೊಮ್ಮೆ ಪಟ್ಟಿ ಮಾಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಲಾಯಿತು.