ಶೇರು ಖರೀದಿ ವ್ಯವಹಾರ ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಬರದು: ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ತೀರ್ಪು
ಶೇರು ಖರೀದಿ ವ್ಯವಹಾರ ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಬರದು: ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ತೀರ್ಪು
ಶೇರು ಖರೀದಿ ವ್ಯವಹಾರ ಒಂದು ವಾಣಿಜ್ಯಾತ್ಮಕ ಚಟುವಟಿಕೆ. ಹಾಗಾಗಿ, ಶೇರು ಖರೀದಿಯಲ್ಲಿ ಆದ ಲೋಪ ಯಾ ತಕರಾರು ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ತೀರ್ಪು ತೀರ್ಪು ನೀಡಿದೆ.
ಪ್ರಕರಣದ ದೂರುದಾರರಾದ ಬೈದ್ಯನಾಥ್ ಮೊಂಡಲ್ ಎದುರುದಾರರಾದ ಕನ್ಹಯ್ಯಲಾಲ್ ರಾಥಿ ಮತ್ತು ಇತರರಿಂದ ಇಕ್ವಿಟಿ ಶೇರುಗಳನ್ನು ಖರೀದಿಸಿದ್ದರು. ಈ ಶೇರುಗಳ ಖರೀದಿಯಲ್ಲಿ ವ್ಯತ್ಯಯ ಉಂಟಾಗಿದ್ದು, ಖರೀದಿಯಲ್ಲಾದ ಲೋಪದ ಬಗ್ಗೆ ಆಕ್ಷೇಪ ಎತ್ತಿ ಬೈದ್ಯನಾಥ್ ಮೊಂಡಲ್ ಎದುರುದಾರರ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಜಿಲ್ಲಾ ನ್ಯಾಯಾಲಯ ಈ ದೂರನ್ನು ಸ್ವೀಕರಿಸಿ ವಿಚಾರಣೆಗೆ ಕೈಗೆತ್ತಿಕೊಂಡಿತು. ಎದುರುದಾರು ಗೈರು ಹಾಜರಾದ ಕಾರಣ ಏಕಪಕ್ಷೀಯ ವಿಚಾರಣೆ ನಡೆದು, ದೂರನ್ನು ಭಾಗಶಃ ಸ್ವೀಕರಿಸಲಾಯಿತು. ಎದುರುದಾರರು ದೂರುದಾರರಿಗೆ ರೂ. 8810/- ಬಡ್ಡಿ ಸಹಿತ ಪಾವತಿಸುವಂತೆ ಆದೇಶ ನೀಡಲಾಯಿತು.
ಈ ಆದೇಶದಿಂದ ಸಂತುಷ್ಟರಾಗದ ದೂರುದಾರರು ಕೊಲ್ಕತ್ತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕದ ತಟ್ಟಿದರು. ಈ ದೂರನ್ನು ಕೊಲ್ಕತ್ತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕಾಲಮಿತಿಗೆ ಒಳಪಟ್ಟಿಲ್ಲ ಮತ್ತು ದೂರುದಾರರು ಗ್ರಾಹಕರಲ್ಲ ಎಂಬ ಕಾರಣಕ್ಕೆ ಮೇಲ್ಮನವಿಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ವಜಾಗೊಳಿಸಿತ್ತು.
ಸ್ಟೀಲ್ ಸಿಟಿ ಸೆಕ್ಯೂರಿಟೀಸ್ Vs ಜಿ.ಪಿ. ರಮೇಶ್ (3-02-2014) ಮತ್ತು ಮೋರ್ಗನ್ ಸ್ಟ್ಯಾನ್ಲಿ ಮ್ಯೂಚುವಲ್ ಫಂಡ್ Vs ಕಾರ್ತಿಕ್ ದಾಸ್ (1994 4 SCC 224) ಪ್ರಕರಣವನ್ನು ಉಲ್ಲೇಖಿಸಿ ಕೊಲ್ಕತ್ತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ದೂರುದಾರರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು. ವಿಳಂಬವನ್ನು ಮನ್ನಿಸಿ ವಿಚಾರಣೆಗೆ ಎತ್ತಿಕೊಂಡ ರಾಷ್ಟ್ರೀಯ ಆಯೋಗ, ಈ ದೂರು ಗ್ರಾಹಕ ಎಂಬ ವ್ಯಾಖ್ಯೆಗೆ ಒಳಪಡುವುದಿಲ್ಲ ಎಂದು ಕೊಲ್ಕತ್ತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ಪುರಸ್ಕರಿಸಿ ಆದೇಶ ಹೊರಡಿಸಿತು.
ಶೇರು ಖರೀದಿ ವ್ಯವಹಾರವು ವಾಣಿಜ್ಯಾತ್ಮಕ ಚಟುವಟಿಕೆಯಾಗಿದೆ. ಹಾಗಾಗಿ, ಇದು ಗ್ರಾಹಕ ಎಂಬ ವ್ಯಾಪ್ತಿಯಿಂದ ಹೊರತಾದ ಚಟುವಟಿಕೆಯಾಗಿದೆ ಎಂದು ಹೇಳಿ ದೂರನ್ನು ವಜಾಗೊಳಿಸಿತು.
ಪ್ರಕರಣ: ಬೈದ್ಯನಾಥ್ ಮೊಂಡಲ್ Vs ಕನ್ಹಯ್ಯಲಾಲ್ ರಾಥಿ ಮತ್ತಿತರರು
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ RP 3286/2016 Dated 29-04-2022