ತನ್ನದೇ ನೌಕರನ ಮರಣ ದೃಢೀಕರಣ ಪತ್ರಕ್ಕೆ ಆರು ವರ್ಷ ಸತಾಯಿಸಿದ ಪಾಲಿಕೆ: ಹೈಕೋರ್ಟ್ ಕೆಂಡಾಮಂಡಲ
ತನ್ನದೇ ನೌಕರನ ಮರಣ ದೃಢೀಕರಣ ಪತ್ರಕ್ಕೆ ಆರು ವರ್ಷ ಸತಾಯಿಸಿದ ಪಾಲಿಕೆ: ಹೈಕೋರ್ಟ್ ಕೆಂಡಾಮಂಡಲ
ಆರು ವರ್ಷಗಳ ಹಿಂದೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಿಬಿಎಂ ನೌಕರರೊಬ್ಬರ ಮರಣ ದೃಢೀಕರಣ ಪತ್ರವನ್ನು ನೀಡಲು ಮೃತರ ಪತ್ನಿಗೆ ಸತಾಯಿಸುತ್ತಿದ್ದ ಬಿಬಿಎಂಪಿ ಅಧಿಕಾರಶಾಹಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, 30 ದಿನಗಳ ಒಳಗಾಗಿ ಮರಣ ದೃಢೀಕರಣ ಪತ್ರ ನೀಡುವಂತೆ ತಾಕೀತು ಮಾಡಿದೆ.
ಪತಿಯ ಮರಣ ದೃಢೀಕರಣ ಪತ್ರವನ್ನು ಬಿಬಿಎಂಪಿ ನೀಡುತ್ತಿಲ್ಲ ಎಂದು ಮೃತರ ಪತ್ನಿ ಎಸ್.ಪಿ. ಸರಸ್ವತಿ ಎಂಬವರು ಕರ್ನಾಟಕ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಮೃತ ನೌಕರ ಶಾಂತಕುಮಾರ್ ಅವರ ಸಾವನ್ನು ವೈದ್ಯರಿಂದ ದೃಢಪಡಿಸುವ ಫಾರಂ ನಂಬರ್ 4ಎ ಪ್ರಮಾಣಪತ್ರ ನೀಡುವಂತೆ ಬಿಬಿಎಂಪಿ ಸೂಚಿಸಿತ್ತು. ಬಿಬಿಎಂಪಿಯ ಈ ನಿರ್ಧಾರವನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿತು.
ಅರ್ಜಿದಾರರ ಪತಿಯು ಬಿಬಿಎಂಪಿಯಲ್ಲಿ ನೌಕರರಾಗಿದ್ದು, ಕರ್ತವ್ಯ ಮಾಡುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪಾಲಿಕೆಯ ಅಧಿಕಾರಿಗಳೇ ಹುಡುಕಾಟ ನಡೆಸಿದ್ದರೂ ದೇಹ ಪತ್ತೆಯಾಗಲಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಮಾನವೀಯ ನೆಲೆಯಲ್ಲಿ ಬಿಬಿಎಂಪಿ ಮೃತರ ಪತ್ನಿಗೆ ಬಿಬಿಎಂಪಿ 10 ಲಕ್ಷ ರೂ. ಪರಿಹಾರ ಪ್ರಕಟಿಸಿದೆ. ಹೀಗಿದ್ದರೂ ವೈದ್ಯರು ಸಾವು ಸಂಭವಿಸಿದೆ ಎಂಬುದಾಗಿ ದೃಢೀಕರಿಸಿ ಕರ್ನಾಟಕ ಮರಣ ಮತ್ತು ಜನನ ನೋಂದಣಿ ಅಧಿನಿಯಮದ ನಿಯಮ 10(3) ಅಡಿಯಲ್ಲಿ ಫಾರಂ 4ಎ ಪ್ರಮಾಣಪತ್ರವನ್ನು ನೀಡಬೇಕು ಎನ್ನುವುದು ಸಮರ್ಥನೀಯವಲ್ಲ ಮತ್ತು ಅತಾರ್ಕಿಕ ನಿರ್ಧಾರ. ಇದರಿಂದ ಅರ್ಜಿದಾರರಿಗೆ ಅನ್ಯಾಯ ಉಂಟುಮಾಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅರ್ಜಿದಾರರ ಪತಿ 2017ರಲ್ಲಿ ಸಾವನ್ನಪ್ಪಿದ್ದಾರೆ. ಅವರ ಮರಣ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಆರು ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಇದಕ್ಕೆ ಮರಣ ವರದಿಯನ್ನು ವೈದ್ಯಕೀಯ ದೃಢೀಕರಣ ಮಾಡಬೇಕಿಲ್ಲ. ನಿಯಮಗಳನ್ನು ಪಾಲಿಸಬೇಕು ಎಂದು ಆದ್ಯತೆ ನೀಡುವ ಮೂಲಕ ಬಿಬಿಎಂಪಿ ನಿಷ್ಠುರವಾಗಿ ನಡೆದುಕೊಳ್ಳಬಾರದು. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ 30 ದಿನಗಳಲ್ಲಿ ಮರಣ ದೃಢೀಕರಣ ಪತ್ರ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿತು.