ನಿವೃತ್ತ ಅಧಿಕಾರಿ ಇಲಾಖಾ ತನಿಖೆಯಲ್ಲಿ ವಕೀಲರನ್ನು ನೇಮಿಸಬಹುದೇ..?- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ನಿವೃತ್ತ ಅಧಿಕಾರಿ ಇಲಾಖಾ ತನಿಖೆಯಲ್ಲಿ ವಕೀಲರನ್ನು ನೇಮಿಸಬಹುದೇ..?- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಇಲಾಖಾ ತನಿಖೆಯಲ್ಲಿ ನಿವೃತ್ತ ಅಧಿಕಾರಿಯು ತಮ್ಮನ್ನು ಸಮರ್ಥಿಸಿಕೊಳ್ಳಲು ವಕೀಲರ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
63 ವರ್ಷದ ಹುಬ್ಬಳ್ಳಿಯ ಟಿ. ರಮೇಶ್ ಬಾಬು ಅವರು ಇಲಾಖಾ ತನಿಖೆಯಲ್ಲಿ ವಕೀಲರನ್ನು ನೇಮಕಾತಿ ಮಾಡಬಯಸಿದ್ದನ್ನು ಹುಬ್ಬಳ್ಳಿಯ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಮೇಶ್ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಇನ್ಶೂರೆನ್ಸ್ ಕಂಪೆನಿಯ ಕ್ರಮವನ್ನು ವಜಾ ಮಾಡಿದೆ.
ಹಿರಿಯ ವಯಸ್ಸಿನಲ್ಲಿ ಉದ್ಯೋಗಿಯು ಇಲಾಖಾ ತನಿಖೆ ಮತ್ತು ಕ್ರಿಮಿನಲ್ ಪ್ರಕ್ರಿಯೆ ಎದುರಿಸುವಾಗ ಮುಜುಗರವಾಗುತ್ತದೆ. ಹೀಗಾಗಿ ವಕೀಲರ ಸಹಾಯ ಅಗತ್ಯವಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಹಾಲಿ ಪ್ರಕರಣವು ಅರ್ಜಿದಾರರಿಗೆ ವಿರುದ್ಧವಾದರೆ ಗಂಭೀರ ಸಿವಿಲ್ ಮತ್ತು ಆರ್ಥಿಕ ಪರಿಣಾಮಕ್ಕೆ ದಾರಿಯಾಗಲಿದೆ. ಎಲ್ಲ ಸೌಲಭ್ಯಗಳನ್ನು ತಡೆ ಹಿಡಿಯುವ ಮೂಲಕ ಅವರು ದಾರಿದ್ರ್ಯಕ್ಕೆ ಈಡಾಗಲಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರರ ವಯಸ್ಸು 60 ದಾಟಿದ್ದು, ಅವರಿಗೆ ಕಿವುಡುತನದ ಸಮಸ್ಯೆ ಇದೆ. ಅವರ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿಯಲಾಗಿದೆ. ಕ್ರಿಮಿನಲ್ ಮತ್ತು ಇಲಾಖಾ ತನಿಖೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹೋದ್ಯೋಗಿಗಳು ಅವರು ನೆರವಿಗೆ ಬರುತ್ತಾರೆ ಎಂದು ಭಾವಿಸಲಾಗದು. ಈಗಾಗಲೇ ಅವರು ನಿವೃತ್ತರಾಗಿದ್ದಾರೆ ಎಂಬುದನ್ನು ಗಮನದಲ್ಲಿಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣ: ಟಿ. ರಮೇಶ್ ಬಾಬು Vs ಯುನೈಟೆಡ್ ಇನ್ಶೂರೆನ್ಸ್ ಕಂ.ಲಿ. ಮತ್ತಿತರರು
ಕರ್ನಾಟಕ ಹೈಕೋರ್ಟ್ (ಧಾರವಾಡ ಪೀಠ) WP 101897/2022 Dated 21-08-2023