ದಿಢೀರ್ ಖ್ಯಾತಿಯ ಹಂಬಲ: ಸುಳ್ಳು ದೂರು ತಂದ ಮಹಾ ಸಂಕಷ್ಟ!- ಯೋಧನ ಹೀನ ಕೃತ್ಯ
ದಿಢೀರ್ ಖ್ಯಾತಿಯ ಹಂಬಲ: ಸುಳ್ಳು ದೂರು ತಂದ ಮಹಾ ಸಂಕಷ್ಟ!- ಯೋಧನ ಹೀನ ಕೃತ್ಯ
ರಾತೋರಾತ್ರಿ ತಾನು ಪ್ರಖ್ಯಾತಿ ಪಡೆಯಬೇಕು, ದೇಶಾದ್ಯಂತ ಸುದ್ದಿಗೆ ಗ್ರಾಸವಾಗಬೇಕು ಎಂಬ ಕಾರಣಕ್ಕೆ ಸುಳ್ಳಿನಿಂದ ಕೂಡಿದ ದೂರು ನೀಡಿದ ಯೋಧ ಮತ್ತು ಆತನ ಸ್ನೇಹಿತರಿಗೆ ಭಾರೀ ಸಂಕಷ್ಟ ಎದುರಾಗಿದೆ.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ಸೇನೆಯ ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿರುವ ಶೈನ್ ಕುಮಾರ್ ಎಂಬಾತ ಈ ಕಟ್ಟುಕಥೆಯ ದೂರನ್ನು ಸೃಷ್ಟಿಸಿದಾತ.
ಕುಡಿತ ಮತ್ತಿನಲ್ಲಿ ಆತ ಈ ಕೃತ್ಯಕ್ಕೆ ಮುಂದಾಗಿದ್ದ. ಭಾನುವಾರ ರಾತ್ರಿ ಬೈಕ್‌ನಲ್ಲಿ ಬರುತ್ತಿದ್ದಾಗ ತನ್ನ ಮೇಲೆ ಅಪರಿಚಿತರ ಗುಂಪೊಂದು ಹಲ್ಲೆ ನಡೆಸಿತು. ತನ್ನ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ಪಿಎಫ್‌ಐ ಎಂದು ಬರೆಯಿತು ಎಂದು ಆರೋಪಿಸಿ ಯೋಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಈ ದೂರನ್ನು ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ಸುಳ್ಳು ದೂರು ಎಂದು ಸ್ಪಷ್ಟವಾಗಿದೆ.
ಈ ಯೋಧನಿಗೆ ತಾನು ದಿಢೀರ್ ಪ್ರಖ್ಯಾತಿ ಪಡೆಯಬೇಕು ಎಂದು ಹಂಬಲ ಇತ್ತು. ಅದಕ್ಕೆ ಅನುಗುಣವಾಗಿ ಶೈನ್ ಕುಮಾರ್ ಸುಳ್ಳಿನ ಕಂತೆ ಸೃಷ್ಟಿಸಿದ್ದಾನೆ. ಕೃತ್ಯಕ್ಕೆ ಬಳಸಿದ ಕುಂಚ, ಬಣ್ಣ ಹಾಗೂ ಯೋಧನ ಕೈಗಳನ್ನು ಕಟ್ಟಲು ಬಳಸಿದ್ದ ಟೇಪ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆತನ ಸ್ನೇಹಿತರೂ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಕುಡಿದ ಮತ್ತಿನಲ್ಲಿ ತನ್ನ ಬೆನ್ನ ಮೇಲೆ ಡಿಎಫ್‌ಐ ಎಂದು ಬರೆದೆ. ಆದರೆ, ಅದನ್ನು ತಿದ್ದಿ ಪಿಎಫ್‌ಐ ಎಂದು ಬರೆಯಲು ಹೇಳಿದ. ಅದರಂತೆ ಮಾಡಿದೆ. ಬಳಿಕ ಆತ ತನ್ನ ಮೇಲೆ ಹಲ್ಲೆ ನಡೆಸುವಂತೆ ಕೋರಿದ್ದ. ಆದರೆ, ನಾನು ಕುಡಿದಿದ್ದೆ. ಹಾಗಾಗಿ, ಆತನನ್ನು ಚೆನ್ನಾಗಿ ಥಳಿಸಲು ಆಗಲಿಲ್ಲ. ಅವನೇ ಹೇಳಿದಂತೆ ಅವನನ್ನು ಬೋರಲಾಗಿ ಮಲಗಿಸಿ ಬಾಯಿಗೆ ಟೇಪ್ ಸುತ್ತಿ ಕೈಗಳನ್ನು ಕಟ್ಟಿ ಹಾಕಿದೆ ಎಂದು ಸ್ನೇಹಿತ ಲಿಖಿತ ಹೇಳಿಕೆ ನೀಡಿದ್ದಾನೆ.