ಪೂರ್ವಸಿದ್ಧತೆ ಇಲ್ಲದೆ ಪ್ರಕರಣದ ಬಗ್ಗೆ ವಾದಿಸಲು ಕಿರಿಯ ವಕೀಲರನ್ನು ಕಳಿಸಿದ ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್ ದಂಡ
ಪೂರ್ವಸಿದ್ಧತೆ ಇಲ್ಲದೆ ಪ್ರಕರಣದ ಬಗ್ಗೆ ವಾದಿಸಲು ಕಿರಿಯ ವಕೀಲರನ್ನು ಕಳಿಸಿದ ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್ ದಂಡ
ಯಾವುದೇ ಪೂರ್ವಸಿದ್ಧತೆ ಇಲ್ಲದೆ ತಾವು ಪ್ರತಿನಿಧಿಸಬೇಕಿದ್ದ ಪ್ರಕರಣದ ಬಗ್ಗೆ ವಾದಿಸಲು ಕಿರಿಯ ವಕೀಲರನ್ನು ಕಳಿಸಿದ ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಪಿ. ನರಸಿಂಹ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ, ಹಿರಿಯ ವಕೀಲರಿಗೆ 2 ಸಾವಿರ ರೂ.ಗಳ ದಂಡ ವಿಧಿಸಿದ್ದಲ್ಲದೆ ಇಂತಹ ಘಟನೆಯನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ.
ಕಕ್ಷಿದಾರರಿಂದ ವಕಾಲತ್ತು ಅಧಿಕಾರ ಪತ್ರ ಪಡೆದಿರುವ ಸುಪ್ರೀಂ ಕೋರ್ಟ್‌ನಲ್ಲಿ ನೋಂದಾಯಿತ ಹಿರಿಯ ವಕೀಲರೊಬ್ಬರು ತಾವು ಪ್ರತಿನಿಧಿಸಬೇಕಾಗಿದ್ದ ಪ್ರಕರಣದ ವಾಯಿದೆ ಪಡೆದುಕೊಳ್ಳಲು ಕಿರಿಯ ವಕೀಲರನ್ನು ನಿಯೋಜಿಸಿದ್ದರು. ಆ ಕಿರಿಯ ವಕೀಲರು ಪ್ರಕರಣವನ್ನು ಮುಂದೂಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ವಿಚಾರಣೆ ಮುಂದೂಡಲು ಹಿರಿಯ ವಕೀಲರು ಲಭ್ಯವಿಲ್ಲದ ಕಾರಣವನ್ನು ಕಿರಿಯ ವಕೀಲರು ನೀಡಿದ್ದರು.
ಇದನ್ನು ಒಪ್ಪದ ನ್ಯಾಯಪೀಠ ಪ್ರಕರಣದ ಕುರಿತಂತೆ ನೀವೇ ವಾದ ಮಂಡಿಸಿ ಎಂದು ಕಿರಿಯ ವಕೀಲರಿಗೆ ಸೂಚಿಸಿತು. ಇದರಿಂದ ಕಕ್ಕಾಬಿಕ್ಕಿಯಾದ ಕಿರಿಯ ವಕೀಲರು ತಾವು ಯಾವುದೇ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ತಮಗೆ ಪ್ರಕರಣದ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಮತ್ತು ಪ್ರಕರಣದಲ್ಲಿ ವಾದ ಮಂಡಿಸುವಂತೆ ತಮಗೆ ಹಿರಿಯ ವಕೀಲರು ಸೂಚನೆ ನೀಡಿಲ್ಲ ಎಂದು ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ನೀವು ಈ ರೀತಿ ನಮ್ಮನ್ನು ಲಘುವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ನ್ಯಾಯಾಲಯದ ಕಾರ್ಯ ಕಲಾಪದಲ್ಲಿ ಮೂಲಭೂತ ವೆಚ್ಚಗಳು ಸೇರಿರುತ್ತವೆ. ತಾವು ವಾದವನ್ನು ನಡೆಸಿ ಎಂದು ತಾಕೀತು ಮಾಡಿತು. ಹಾಗೂ ಹಿರಿಯ ವಕೀಲರನ್ನು ನ್ಯಾಯಪೀಠದ ಮುಂದೆ ಹಾಜರಾಗುವಂತೆ ಸೂಚಿಸಿತು.
ನಾವು ಪ್ರಕರಣದ ವಿಚಾರಣೆ ನಡೆಸುವಂತೆ ಸಂವಿಧಾನದಿಂದ ಸೂಚನೆ ಪಡೆದಿದ್ದೇವೆ. ದಯವಿಟ್ಟು ನೋಂದಾಯಿತ ವಕೀಲರನ್ನು ಕರೆಸಿ. ನಮ್ಮ ಮುಂದೆ ಹಾಜರಾಗುವಂತೆ ಅವರಿಗೆ ಹೇಳಿ ಎಂದು ನ್ಯಾಯಪೀಠ ವಕೀಲರಿಗೆ ಹೇಳಿತು.
ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ಹಿರಿಯ ವಕೀಲರು ನ್ಯಾಯಪೀಠದ ಮುಂದೆ ಹಾಜರಾದರು. ಯಾವುದೇ ಪೂರ್ವಸಿದ್ದತೆ ಇಲ್ಲದೆ ಕಿರಿಯ ವಕೀಲರನ್ನು ಕಲಾಪಕ್ಕೆ ಕಳುಹಿಸಿದ ವಕೀಲರಿಗೆ ಎರಡು ಸಾವಿರ ರೂ.ಗಳ ದಂಡ ವಿಧಿಸಿದ ನ್ಯಾಯಪೀಠ, ಇಂತಹ ಘಟನೆ ಮತ್ತೊಮ್ಮೆ ನಡೆಯದಂತೆ ನೋಡಿಕೊಳ್ಳಿ ಎಂಬ ಎಚ್ಚರಿಕೆ ನೀಡಿತು. ಅಲ್ಲದೆ, ಇದು ಕಿರಿಯ ವಕೀಲರಿಗೆ ಮಾಡಿದ ಅನ್ಯಾಯ. ಅವರನ್ನು ಯಾವುದೇ ದಾಖಲೆ ಇಲ್ಲದೆ ವಾದ ನಡೆಸಲು ನ್ಯಾಯಪೀಠದ ಮುಂದೆ ಕಳಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿತು.