ನಿವೃತ್ತ ಉಪ ತಹಶೀಲ್ದಾರರಿಗೇ ಉಂಡೆನಾಮ: ಬಡ್ಡಿ ಆಸೆ ತೋರಿಸಿ ವಂಚಿಸಿದ ಜ್ಯೋತಿಷಿ ಅರೆಸ್ಟ್!
ನಿವೃತ್ತ ಉಪ ತಹಶೀಲ್ದಾರರಿಗೇ ಉಂಡೆನಾಮ: ಬಡ್ಡಿ ಆಸೆ ತೋರಿಸಿ ವಂಚಿಸಿದ ಜ್ಯೋತಿಷಿ ಅರೆಸ್ಟ್!
ಬಡ್ಡಿ ಹಣದ ಆಸೆ ತೋರಿಸಿ ನಿವೃತ್ತ ಉಪ ತಹಶೀಲ್ದಾರರೊಬ್ಬರಿಗೇ ಜ್ಯೋತಿಷಿಯೊಬ್ಬರು ಉಂಡೆನಾಮ ಹಾಕಿದ ಪ್ರಸಂಗ ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ನಡೆದಿದೆ.
ನಿವೃತ್ತ ಉಪ ತಹಶೀಲ್ದಾರ ಬಿ. ಹೊಂಬಯ್ಯ ಅವರು ವಂಚನೆಗೊಳಗಾಗಿದ್ದು, ಆರೋಪಿ ಶಿಕ್ಷಕ ಎನ್. ನಾಗರಾಜು ಮತ್ತು ಬೆಂಗಳೂರು ಬನಶಂಕರಿಯ ಜ್ಯೋತಿಷಿ ಹರೀಶ್ ಶಾಸ್ತ್ರಿ ಎಂಬಿಬ್ಬರು ಸೇರಿ ಬರೋಬ್ಬರಿ 1.39 ಕೋರಿ ರೂಪಾಯಿ ವಂಚಿಸಿದ್ದಾರೆ.
ಈ ಬಗ್ಗೆ ಹೊಂಬಯ್ಯ ಅವರು ನೆಲಮಂಗಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿ ಜ್ಯೋತಿಷಿ ಮತ್ತು ಶಿಕ್ಷಕನನ್ನು ಬಂಧಿಸಲಾಗಿದೆ.
ಆರೋಪಿಗಳ ಪೈಕಿ ನಾಗರಾಜು ಶಿಕ್ಷಕರಾಗಿದ್ದು, ಇನ್ನೊಬ್ಬ ಆರೋಪಿ ಹರೀಶ್ ಶಾಸ್ತ್ರಿ ಜ್ಯೋತಿಷಿಯಾಗಿದ್ದಾನೆ. ಈತ ಯೂಟ್ಯೂಬ್ ಚಾನೆಲ್‌ಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ ಎನ್ನಲಾಗಿದೆ.
2022ರಲ್ಲಿ ಹೊಂಬಯ್ಯ ಅವರಿಗೆ ನಾಗರಾಜು ಮತ್ತು ಹರೀಶ್ ಪರಿಚಯವಾಗಿತ್ತು. ಆ ವರ್ಷದ ಒಂದು ದಿನ ರೂ. 49 ಕೋಟಿ ಮೌಲ್ಯದ ಎಸ್‌ಬಿಐ ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ತೋರಿಸಿದ್ದ ಆರೋಪಿಗಳು, ಡಿ.ಡಿ.ಯನ್ನು ನಗದು ಮಾಡಲು ಹಣದ ಅವಶ್ಯಕತೆ ಇದೆ. ನೀವು ಕೊಟ್ಟರೆ ಅದನ್ನು ಬಡ್ಡಿ ಸಹಿತ ವಾಪಸ್ ನೀಡುವುದಾಗಿ ನಂಬಿಸಿ ಹೊಂಬಯ್ಯ ಅವರಿಂದ ಹಣ ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಣ್ಣದ ಮಾತನ್ನು ನಂಬಿದ್ದ ಹೊಂಬಯ್ಯ ಹಂತ ಹಂತವಾಗಿ ರೂ. 1.39 ಕೋಟಿ ಹಣವನ್ನು ನೀಡಿದ್ದರು. ಆರು ತಿಂಗಳಾದರೂ ಆರೋಪಿಗಳು ಹಣ ನೀಡದೆ ಸತಾಯಿಸುತ್ತಿದ್ದರು.
ಹೊಂಬಯ್ಯ ಅವರು ಜುಲೈ 6, 2023ರಂದು ದೂರು ನೀಡಿದ್ದು, ಆಗಲೇ ಎಫ್‌ಐಆರ್ ಮಾಡಲಾಗಿತ್ತು.
ಪ್ರಕರಣದ ದಾಖಲಾದ ಬಳಿಕ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಪುರಾವೆ ಸಂಗ್ರಹಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.