ಅನ್ಯ ಇಲಾಖೆಗೆ ನಿಯೋಜನೆ: ಅವಧಿ ಪೂರೈಸಿದ ನೌಕರರು ತಕ್ಷಣ ಮಾತೃ ಇಲಾಖೆಗೆ ಮರಳಿ- ಸರ್ಕಾರ ಸೂಚನೆ
ಅನ್ಯ ಇಲಾಖೆಗೆ ನಿಯೋಜನೆ: ಅವಧಿ ಪೂರೈಸಿದ ನೌಕರರು ತಕ್ಷಣ ಮಾತೃ ಇಲಾಖೆಗೆ ಮರಳಿ- ಸರ್ಕಾರ ಸೂಚನೆ
5 ವರ್ಷ ನಿಯೋಜನೆ ಅವಧಿ ಪೂರ್ಣಗೊಳಿಸಿದ ಸರ್ಕಾರಿ ನೌಕರರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಮರಳಿ ಮಾತೃ ಇಲಾಖೆಗೆ ಕರೆಸಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಸುತ್ತೋಲೆ ಹೊರಡಿಸಿದ್ದು, ಇತರ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ರವಾನಿಸಲಾಗಿದೆ. ಸೂಚನೆ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ಯಾವುದೇ ಹುದ್ದೆಗೆ ನಿಯೋಜನೆಯ ಅವಧಿ ಗರಿಷ್ಠ ಐದು ವರ್ಷಗಳು. ಈ ನಿಯೋಜನೆಯ ನಂತರ ನೌಕರರು ಮತ್ತೆ ಮಾತೃ ಇಲಾಖೆಯಲ್ಲಿ ಎರಡು ವರ್ಷಗಳ ಅವಧಿಯ ಸೇವೆಯನ್ನು ಪೂರ್ಣಗೊಳಿಸಬೇಕು. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯೊಂದಿಗೆ ಐದು ವರ್ಷ ಅವಧಿಗೆ ಅವರನ್ನು ನಿಯೋಜನೆ ಮಾಡಲಾಗುತ್ತದೆ.
ಈ ಅವಧಿಯನ್ನು ಪೂರ್ಣಗೊಳಿಸಿದ ನೌಕರರು ತಕ್ಷಣದಿಂದಲೇ ಜಾರಿಯಾಗುವಂತೆ ಮಾತೃ ಇಲಾಖೆಗೆ ಮರಳಬೇಕು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.
ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಯೋಜನೆಗೆ ಅವಕಾಶ ಇರುವ ಹುದ್ದೆಗಳಿಗೆ ಮಾತ್ರ ಸಮಾಜ ದರ್ಜೆಯ ಅಧಿಕಾರಿ, ನೌಕರರನ್ನು ಅನಿವಾರ್ಯ ಪ್ರಕರಣಗಳಲ್ಲಿ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ನಿಯಮಾನುಸಾರ ನಿಯೋಜನೆ ಮಾಡಬಹುದು.
ಆದರೆ, ಇಲಾಖೆಯಲ್ಲಿ ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆಯ ಹುದ್ದೆಗೆ ವೇತನ ಶ್ರೇಣಿ ಆಧಾರದಲ್ಲಿ ನೇಮಕ ಅಥವಾ ನಿಯೋಜನೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ಸುತ್ತೋಲೆ ಸ್ಪಷ್ಟಪಡಿಸಿದೆ.