ಸರ್ಕಾರಿ ಗೈಡ್‌ಲೈನ್ಸ್ ದರ ಪರಿಷ್ಕರಣೆ: ಆಸ್ತಿ ನೋಂದಣಿ ಇನ್ನು ದುಬಾರಿ
ಸರ್ಕಾರಿ ಗೈಡ್‌ಲೈನ್ಸ್ ದರ ಪರಿಷ್ಕರಣೆ: ಆಸ್ತಿ ನೋಂದಣಿ ಇನ್ನು ದುಬಾರಿ- ಅಕ್ಟೋಬರ್ 1ರಿಂದ ಹೊಸ ದರ ಜಾರಿ
ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸರ್ಕಾರಿ ಗೈಡ್‌ಲೈನ್ಸ್ ದರವನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಈ ನಿರ್ಧಾರದಿಂದ ಆಸ್ತಿ ನೋಂದಣಿ ಇನ್ನು ದುಬಾರಿಯಾಗಲಿದ್ದು, ದೊಡ್ಡ ಮೊತ್ತದ ತೆರಿಗೆಯನ್ನು ಖರೀದಿದಾರರು ಪಾವತಿಸಬೇಕಾಗುತ್ತದೆ.
ಈ ಪರಿಷ್ಕರಣೆಯಿಂದ ಭೂಮಿ, ನಿವೇಶನ ಮತ್ತು ಕಟ್ಟಡ ಸೇರಿ ಸ್ಥಿರಾಸ್ತಿಗಳ ಮೌಲ್ಯ ಏರಿಕೆಯಾಗಲಿದ್ದು, ಮಾರುಕಟ್ಟೆ ಮೌಲ್ಯ ಮತ್ತು ಮಾರ್ಗಸೂಚಿ ದರದ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಕ್ರಮ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಷ್ಕೃತ ಮಾರ್ಗಸೂಚಿ ದರದ ಕರಡು ಪ್ರಕಟವಾಗಿದ್ದು, ಸರಾಸರಿ ಸ್ಥಿರಾಸ್ತಿ ಮೌಲ್ಯ ಶೇಕಡಾ 30ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಬೆಂಗಳೂರು ಪರಿಸರ ಮತ್ತು ಸುತ್ತಮುತ್ತ ಮಾರ್ಗಸೂಚಿ ದರ ಗರಿಷ್ಟ ಪ್ರಮಾಣದಲ್ಲಿ ನಿಗದಿಯಾಗಿದೆ.
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳು ಸೇರಿ ಕೆಲವು ಆಯ್ದ ಕಡೆಗಳಲ್ಲಿ ಮಾರ್ಗಸೂಚಿ ದರಗಳು ಶೇಕಡಾ 90ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಭೂಮಿ ಮೌಲ್ಯ ಆ ಸ್ಥಳಗಳಲ್ಲಿ ದುಪ್ಪಟ್ಟಾಗಲಿದೆ.