ಆಂಧ್ರ ಪ್ರದೇಶದಲ್ಲಿ ಸರ್ಕಾರಿ ನೌಕರರ ಖಾತರಿ ಪಿಂಚಣಿ ಯೋಜನೆ: ಸಂಪುಟ ಅನುಮೋದನೆ
ಆಂಧ್ರ ಪ್ರದೇಶದಲ್ಲಿ ಸರ್ಕಾರಿ ನೌಕರರ ಖಾತರಿ ಪಿಂಚಣಿ ಯೋಜನೆ: ಸಂಪುಟ ಅನುಮೋದನೆ
ಆಂಧ್ರಪ್ರದೇಶ ಸರಕಾರಿ ನೌಕರರ ಖಾತರಿ ಪಿಂಚಣಿ ಯೋಜನೆ (APGPS) ಮಸೂದೆಗೆ ಸಚಿವ ಸಂಪುಟದ ಅನುಮೋದನೆ
ಸರಕಾರಿ ನೌಕರರ ಖಾತರಿ ಪಿಂಚಣಿ ಯೋಜನೆ ಆಂಧ್ರಪ್ರದೇಶ ರಾಜ್ಯದಲ್ಲಿ ಜಾರಿಗೆ ಬಂದಿದೆ. APGPS ಮಸೂದೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ರಾಜ್ಯದ ಅರ್ಥ ಸಚಿವ ಬುಗ್ಗಣ ರಾಜೇಂದ್ರನಾಥ ರೆಡ್ಡಿ ಮಸೂದೆಯನ್ನು ಮಂಡಿಸಿ ರಾಜ್ಯದ ಸರಕಾರಿ ನೌಕರರಿಗೆ ನಿವೃತ್ತಿ ಜೀವನದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ದಿನಾಂಕ 1.9.2004 ರ ಬಳಿಕ ರಾಜ್ಯ ಸರಕಾರದ ಸೇವೆಗೆ ಸೇರಿದ ಎಲ್ಲಾ ನೌಕರರು ಈ ನೂತನ ಯೋಜನೆಗೆ ಒಳಪಡುತ್ತಾರೆ. ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬ ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಪರಿಶೀಲಿಸಿದ ಬಳಿಕ ಹಳೆಯ ಪಿಂಚಣಿ ಯೋಜನೆಯ ಮರು ಅಳವಡಿಕೆ ಕಾರ್ಯಸಾಧುವಲ್ಲ ಎಂಬ ನಿಷ್ಕರ್ಷಗೆ ಬಂದ ರಾಜ್ಯ ಸರಕಾರವು ಖಾತರಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತು.
ಒಂದು ವೇಳೆ ಹಳೆಯ ಪಿಂಚಣಿ ಯೋಜನೆ ಅನುಷ್ಠಾನಗೊಂಡಿದ್ದಲ್ಲಿ ಮುಂದಿನ 10 ವರ್ಷಗಳ ಕಾಲ ನೌಕರರಿಗೆ ವೇತನ ಪಾವತಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹಳೆಯ ಪಿಂಚಣಿ ಪದ್ಧತಿಯನ್ನು ಮರು ಅಳವಡಿಸಿಕೊಂಡಿರುವ ಐದು ರಾಜ್ಯಗಳ ಆರ್ಥಿಕ ಪರಿಸ್ಥಿತಿಯನ್ನು ಪರಾಂಬರಿಸಿದ ಬಳಿಕ ರಾಜ್ಯ ಸರ್ಕಾರ ಖಾತರಿ ಪಿಂಚಣಿ ಯೋಜನೆ ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಸಚಿವರು ತಿಳಿಸಿದರು.
ರಾಜ್ಯದ 5.07 ಲಕ್ಷ ಸರಕಾರಿ ನೌಕರರ ಪೈಕಿ 2.02 ಲಕ್ಷ ನೌಕರರು ಹಳೆಯ ಪಿಂಚಣಿ ಯೋಜನೆಗೆ ಒಳಪಟ್ಟವರಾಗಿದ್ದಾರೆ. ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ (NPS) ಅಡಿ 3.73 ಲಕ್ಷ ನೌಕರರಿದ್ದಾರೆ.
ಖಾತರಿ ಪಿಂಚಣಿ ಯೋಜನೆ ಮೂಲಕ ಮೂಲವೇತನದ 50 ಪ್ರತಿಶತ ಖಾತರಿಯ ಮಾಸಿಕ ಪಿಂಚಣಿಗೆ ರಾಜ್ಯದ ಎಲ್ಲಾ ಸರಕಾರಿ ನೌಕರರು ಅರ್ಹರಾಗುತ್ತಾರೆ. ಇದು ವಂತಿಗೆ ಆಧಾರಿತ ಯೋಜನೆಯಾಗಿದ್ದು ಉದ್ಯೋಗಿ ಹಾಗೂ ಸರಕಾರ ಮೂಲವೇತನದ 14 ಶೇಕಡ ಕೊಡುಗೆ ನೀಡಬೇಕಾಗುತ್ತದೆ. ಪಿಂಚಣಿ ಮೊತ್ತದ ಮೇಲಿನ ತುಟ್ಟಿಬತ್ತೆಯನ್ನು ಕೇಂದ್ರ ಸರಕಾರವು ನೀಡುವ ದರದಲ್ಲಿ ರಾಜ್ಯ ಸರಕಾರವು ನೀಡುತ್ತದೆ. ಪಿಂಚಣಿದಾರನು ಮೃತನಾದ ಬಳಿಕ ಆತನ ಸಂಗಾತಿಗೆ ಕುಟುಂಬ ಪಿಂಚಣಿ ದೊರಕುತ್ತದೆ.
ಅರ್ಹತೆಯ ಮಾನದಂಡಗಳು
1. ವಯೋನಿವೃತ್ತಿಯ ಸಂದರ್ಭದಲ್ಲಿ ಕನಿಷ್ಠ 10 ವರ್ಷಗಳ ಅರ್ಹತಾ ಸೇವೆ ಸಲ್ಲಿಸಿರಬೇಕು.
2. ಸ್ವಯಂ ನಿವೃತ್ತಿಯ ಸಂದರ್ಭದಲ್ಲಿ ಕನಿಷ್ಠ 20 ವರ್ಷಗಳ ಅರ್ಹತಾ ಸೇವೆ ಸಲ್ಲಿಸಿರಬೇಕು.
3. ವೈದ್ಯಕೀಯ ನೆಲೆಯಲ್ಲಿ ಸೇವೆಯಿಂದ ನಿವೃತ್ತಿ ಪಡೆದಲ್ಲಿ ಕನಿಷ್ಠ 10 ವರ್ಷಗಳ ಅರ್ಹತಾ ಸೇವೆ ಸಲ್ಲಿಸಿರಬೇಕು.
4. ಸೇವೆಯಿಂದ ತೆಗೆದು ಹಾಕಲಾದ, ವಜಾ ಗೊಳಿಸಲಾದ ಹಾಗೂ ಶಿಸ್ತು ಕ್ರಮದಿಂದಾಗಿ ಕಡ್ಡಾಯ ನಿವೃತ್ತಿ ಪಡೆದ ನೌಕರರು ಈ ಯೋಜನೆಯಲ್ಲಿ ಪಿಂಚಣಿ ಪಡೆಯಲು ಅರ್ಹರಾಗಿರುವುದಿಲ್ಲ.
ನೂತನ ಪಿಂಚಣಿ ಯೋಜನೆಯಲ್ಲಿ ಕನಿಷ್ಠ ವರ್ಷಗಳ ಅರ್ಹತಾ ಸೇವೆಯನ್ನು ನಿಗದಿಪಡಿಸಿರಲಿಲ್ಲ. ಒಂದು ವರ್ಷ ಸೇವೆ ಸಲ್ಲಿಸಿದ ನೌಕರರಿಗೂ ಪಿಂಚಣಿ ದೊರಕುತ್ತಿತ್ತು.
ಆಂಧ್ರಪ್ರದೇಶ ಸರಕಾರವು ಜಾರಿಗೊಳಿಸಿರುವ ಖಾತರಿ ಪಿಂಚಣಿ ಯೋಜನೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ದೇಶದ ಇತರ ರಾಜ್ಯಗಳು ಆಸಕ್ತರಾಗಿದ್ದು ಆಂಧ್ರಪ್ರದೇಶ ಸರಕಾರದಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಿವೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರಕಾರವು ನೌಕರ ಸಂಘಟನೆಗಳೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವುದು ಪ್ರಾಯೋಗಿಕ ಹಾಗೂ ಕಾರ್ಯಸಾಧು ಅಲ್ಲ ಎಂಬ ವಾಸ್ತವ ಸಂಗತಿಯನ್ನು ಅವರಿಗೆ ಮನವರಿಕೆ ಮಾಡಿಸಿ ಜಿಪಿಎಸ್ ಅನ್ನು ಜಾರಿಗೆ ತಂದಿತು. ಹೊಸ ಪಿಂಚಣಿ ಯೋಜನೆಯನ್ನು ರೂಪಿಸುವ ಮೊದಲು ಸಚಿವ ಸಂಪುಟದ ಉಪಸಮಿತಿ ಮತ್ತು ಅಧಿಕಾರಿಗಳು ವಿವಿಧ ಮಾದರಿಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.
ಹಳೆಯ ಪಿಂಚಣಿ ಯೋಜನೆಯನ್ನು ಮರು ಅಳವಡಿಸಿಕೊಂಡಿರುವ ರಾಜ್ಯಗಳು ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಆ ರಾಜ್ಯಗಳಿಗಿಂತ ಆಂಧ್ರಪ್ರದೇಶ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಖಾತರಿ ಪಿಂಚಣಿ ಯೋಜನೆಯು ಪ್ರಾಯೋಗಿಕವಾಗಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಲಯ ಸಂಕೀರ್ಣ, ಮಂಗಳೂರು