ಗ್ರ್ಯಾಚುಟಿ ಅನಗತ್ಯ ವಿಳಂಬ- ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್: ನಿವೃತ್ತರಿಗೆ ಬಡ್ಡಿ, ದಂಡ ಸಹಿತ ಹಣ ನೀಡಲು ಹೈಕೋರ್ಟ್ ಆದೇಶ
ಗ್ರ್ಯಾಚುಟಿ ಅನಗತ್ಯ ವಿಳಂಬ- ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್: ನಿವೃತ್ತರಿಗೆ ಬಡ್ಡಿ, ದಂಡ ಸಹಿತ ಹಣ ನೀಡಲು ಹೈಕೋರ್ಟ್ ಆದೇಶ
ಯಾವುದೇ ಕಾರಣವಿಲ್ಲದೆ ನಿವೃತ್ತ ಉದ್ಯೋಗಿಯೊಬ್ಬರ ಗ್ರ್ಯಾಚುಟಿ ಹಣವನ್ನು ಪಾವತಿಸಲು ವಿಳಂಬ ಮಾಡಿರುವ ಪ್ರಾಧಿಕಾರದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 30 ದಿನಗಳಲ್ಲಿ ನಿವೃತ್ತರಿಗೆ ಬಡ್ಡಿ ಸಹಿತ ಗ್ರ್ಯಾಚುಟಿ ಹಣವನ್ನು ಪಾವತಿಸುವಂತೆ ನಿರ್ದೇಶನ ನೀಡಿದೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೈಕೋರ್ಟ್ ಈ ಮೂಲಕ ಚಾಟಿ ಬೀಸಿದೆ.
ಗ್ರ್ಯಾಚುಟಿಯನ್ನು ನಿಗದಿತ ಅವಧಿಯಲ್ಲಿ ಪಾವತಿಸದೇ ಈ ಇಲಾಖೆಯ ಅಧಿಕಾರಿಗಳು ನಿವೃತ್ತ ಉದ್ಯೋಗಿಯನ್ನು ಅಮಾನುಷವಾಗಿ ನೋಡಿಕೊಂಡಿದ್ದಾರೆ. ಸಂತ್ರಸ್ತ ಉದ್ಯೋಗಿ ನಿವೃತ್ತರಾಗಿ 16 ವರ್ಷಗಳು ಸಂದಿವೆ. ಕಂಟ್ರೋಲಿಂಗ್ ಅಥಾರಿಟಿ ಹಣ ಪಾವತಿಸಲು ಆದೇಶ ಮಾಡಿ 11 ವರ್ಷಗಳು ಕಳೆದಿವೆ. ಆದರೂ, ಇಲಾಖೆಗಳು ಸಂತ್ರಸ್ತರಿಗೆ ಹಣ ಪಾವತಿಸಿಲ್ಲ ಎಂದು ನ್ಯಾಯಪೀಠ ಗಮನಿಸಿತು.
ಗ್ರ್ಯಾಚುಟಿ ಹಣವನ್ನು ಮರಳಿಸುವಲ್ಲಿ ಸುದೀರ್ಘ ವಿಳಂಬವಾಗಿದೆ. ಇದು ಬರೀ ವಿಳಂಬವಲ್ಲ. ಇದೊಂದು ಅಪರಾಧಿಕ ವಿಳಂಬ. ಇಳಿ ವಯಸ್ಸಿನಲ್ಲಿ ಅವರ ಆರ್ಥಿಕ ಆವಶ್ಯಕತೆಗಳಿಗೆ ಸರ್ಕಾರ ಸ್ಪಂದಿಸದೇ ಇರುವುದು ಸರಿಯಾದ ಕ್ರಮವಲ್ಲ ಎಂದು ಅಧಿಕಾರಿಗಳಿಗೆ ನ್ಯಾಯಪೀಠ ಖಾರವಾಗಿ ಹೇಳಿದೆ.
ಬಾಕಿ ಇರುವ 4.9 ಲಕ್ಷ ರೂ. ಮೊತ್ತವನ್ನು ಶೇ. 10ರಷ್ಟು ಬಡ್ಡಿಯನ್ನು ಸೇರಿಸಿ 30 ದಿನಗಳೊಳಗಾಗಿ ಸಂತ್ರಸ್ತರಿಗೆ ಪಾವತಿ ಮಾಡಬೇಕು. ತಪ್ಪಿದ್ದಲ್ಲಿ ಪ್ರತಿ ದಿನಕ್ಕೆ ರೂ. 1000/-ದಂತೆ ದಂಡ ಸೇರಿಸಿ ಪಾವತಿಸಬೇಕು. ಅಷ್ಟೇ ಅಲ್ಲ, ದಂಡದ ಮೊತ್ತಕ್ಕೂ ಬಡ್ಡಿ ಸೇರಿಸಿ ಕೊಡಬೇಕು ಎಂದು ಎರಡೂ ಇಲಾಖೆ ಮತ್ತು ಅದರ ಅಧಿಕಾರಿಗಳಿಗೆ ನ್ಯಾಯಪೀಠ ಖಡಕ್ ನಿರ್ದೇಶನ ನೀಡಿದೆ.