ಅತ್ಯಾಚಾರಿಗೆ 25 ವರ್ಷ ಜೈಲು ಶಿಕ್ಷೆ: ಸೆಷನ್ಸ್ ನ್ಯಾಯಾಲಯದ ಆದೇಶ
ಅತ್ಯಾಚಾರಿಗೆ 25 ವರ್ಷ ಜೈಲು ಶಿಕ್ಷೆ: ಸೆಷನ್ಸ್ ನ್ಯಾಯಾಲಯದ ಆದೇಶ
15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಚಿತ್ರಹಿಂಸೆ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧ ಮಾಡಿದ ವ್ಯಕ್ತಿಗೆ 25 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ರೂ. 70 ಸಾವಿರ ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಿಕ್ಷೆಗೊಳಗಾದ ವ್ಯಕ್ತಿ ಮಹಾರಾಷ್ಟ್ರದ ಕಂಕೋಲಿ ಗ್ರಾಮದ ವಿಕಾಸ್ ಚೌಹಾಣ್. ಈತ ಗೋವಾದಲ್ಲಿ ಬೋಟ್ ರೈಡರ್ ಆಗಿದ್ದ. ವಿಚ್ಚೇದಿತನಾಗಿದ್ದ ವಿಕಾಸ್ ಸಂತ್ರಸ್ತೆಯ ಜೊತೆಗೆ ಪ್ರೀತಿಸುವ ನಾಟಕವಾಡಿದ್ದ.
ಬಾಲಕಿಯ ಪೋಷಕರು ಗೋವಾದಲ್ಲಿ ಕೂಲಿ ಕಾರ್ಮಿಕರು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಕೂಲಿ ಕಾರ್ಮಿಕ ಕುಟುಂಬ ವಿಕಾಸ್ ಚೌಹಾಣ್ ಬಳಿಗೆ ತೆರಳಿತ್ತು. ಈ ಸಂದರ್ಭದಲ್ಲಿ ಸಂತ್ರಸ್ತೆ ಜೊತೆ ಪರಿಚಯ ಮಾಡಿಕೊಂಡ ಆರೋಪಿ ಪ್ರೀತಿಸುವ ನಾಟಕವಾಡಿದ್ದ.
ಇದನ್ನು ತಿಳಿದ ಪೋಷಕರು ಬಾಲಕಿಯನ್ನು ಅಕ್ಕನ ಊರಿಗೆ ಕಳುಹಿಸಿದ್ದರು. ಆದರೂ, ವಿಳಾಸ ಪತ್ತೆ ಮಾಡಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆ ಬಾಲಕಿಯನ್ನು ಅಪಹರಿಸಿ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದ.
ಅಲ್ಲಿ ಆತ ಬಾಲಕಿಯ ಮೇಲೆ ನಿರಂತರ 25 ದಿನಗಳ ಕಾಲ ಅತ್ಯಾಚಾರ ಮಾಡಿದ್ದ. ಕೆಲಸಕ್ಕೆ ಕಳುಹಿಸಿ ಆಕೆಯನ್ನು ದುಡಿಸಿಕೊಳ್ಳುತ್ತಿದ್ದ. ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಾಲಕಿಯನ್ನು ರಕ್ಷಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಆರೋಪಿಗೆ 25 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ರೂ. 70 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ದಂಡ ತೆರಲು ತಪ್ಪಿದರೆ ಹೆಚ್ಚುವರಿ ಐದು ವರ್ಷಗಳ ಕಾಲ ಕಾರಾಗೃಹವಾಸದ ಶಿಕ್ಷೆ ವಿಧಿಸಿದ್ದಾರೆ.