-->
ಸಾರ್ವಜನಿಕ ನೌಕರರ ವಿರುದ್ಧ ಕಾನೂನು ಕ್ರಮಕ್ಕೆ ಸಕ್ಷಮ ಪ್ರಾಧಿಕಾರದ ಮಂಜೂರಾತಿ ಕಡ್ಡಾಯವೇ?- ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು

ಸಾರ್ವಜನಿಕ ನೌಕರರ ವಿರುದ್ಧ ಕಾನೂನು ಕ್ರಮಕ್ಕೆ ಸಕ್ಷಮ ಪ್ರಾಧಿಕಾರದ ಮಂಜೂರಾತಿ ಕಡ್ಡಾಯವೇ?- ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು

ಸಾರ್ವಜನಿಕ ನೌಕರರ ವಿರುದ್ಧ ಕಾನೂನು ಕ್ರಮಕ್ಕೆ ಸಕ್ಷಮ ಪ್ರಾಧಿಕಾರದ ಮಂಜೂರಾತಿ ಕಡ್ಡಾಯವೇ?- ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು






ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಸಾರ್ವಜನಿಕ ನೌಕರರನ್ನು ವಿಚಾರಣೆಗೆ ಒಳಪಡಿಸಲು ಸಕ್ಷಮ ಪ್ರಾಧಿಕಾರದ ಮಂಜೂರಾತಿ ಕಡ್ಡಾಯ. ಆದರೆ ಭಾರತೀಯ ದಂಡ ಸಂಹಿತೆಯಡಿ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು


ಭ್ರಷ್ಟಾಚಾರ ತಡೆ ಕಾಯ್ದೆಯಡಿ (ಪಿ.ಸಿ.ಆಕ್ಟ್) ಶಿಕ್ಷಾರ್ಹ ಅಪರಾಧ ಎಸಗಿದ ಸಾರ್ವಜನಿಕ ನೌಕರರ ವಿಚಾರಣೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.)ಯಡಿ ಎಸಗಿದ ಶಿಕ್ಷಾರ್ಹ ಅಪರಾಧಗಳ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಲ್ಲ ಎಂಬುದಾಗಿ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಬಿ. ಆರ್. ಗವಾಯಿ ಮತ್ತು ಜೆ.ಬಿ.ಪರ್ದಿವಾಲಾ ಇವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗಿಯ ನ್ಯಾಯ ಪೀಠವು ಎ. ಶ್ರೀನಿವಾಸ ರೆಡ್ಡಿ VS ರಾಕೇಶ್ ಶರ್ಮ ಮತ್ತೊಬ್ಬರು ಈ ಪ್ರಕರಣದಲ್ಲಿ ದಿನಾಂಕ 8.8.2023 ರಂದು ಈ ತೀರ್ಪು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ನ ಹೈದರಾಬಾದ್ ಶಾಖೆಯಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಈ ಪ್ರಕರಣದಲ್ಲಿ ಮೇಲ್ಮನವಿದಾರರಾದ ಶ್ರೀ ಎ. ಶ್ರೀನಿವಾಸ ರೆಡ್ಡಿ ಅವರು ಸಾಲ ವಿತರಣೆಯ ನಿಯಮ ಹಾಗೂ ಶರತ್ತುಗಳನ್ನು ಅನುಸರಿಸದೇ ಕಾರ್ಪೊರೇಟ್ ಸಾಲದ ಹಾಗೂ ನಗದು ಕ್ರೆಡಿಟ್ ನೀತಿಯ ಬಿಡುಗಡೆಯನ್ನು ಅನುಮೋದಿಸುವಲ್ಲಿ ನಿಯಮಗಳನ್ನು ಉಲ್ಲಂಘಿಸಿ ಮೆ.ಸ್ಪೆನ್ ಜೆನೆಟಿಕ್ ಲಿಮಿಟೆಡ್ ಎಂಬ ಕಂಪನಿಗೆ 22.50 ಕೋಟಿ ರೂಪಾಯಿಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿದ್ದರು.

ಮಂಜೂರಾದ ಸಾಲದ ಹಣವನ್ನು ಕಂಪನಿಯು ತನ್ನ ವೈಯಕ್ತಿಕ ಪ್ರಯೋಜನಗಳಿಗೆ ಬಳಸಿದ್ದು ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಮೇಲ್ಮನವಿದಾರರ ಸಹಕಾರದಿಂದ ಅಕ್ರಮ ಲಾಭ ಪಡೆದುಕೊಂಡಿರುತ್ತಾರೆ ಎಂಬ ಆರೋಪವನ್ನು ಹೊರಿಸಿ ಕೇಂದ್ರೀಯ ತನಿಖಾ ದಳ (ಸಿ.ಬಿ.ಐ.) ದಿನಾಂಕ 30-10-2013 ರಂದು ಎ. ಶ್ರೀನಿವಾಸ ರೆಡ್ಡಿ ಮತ್ತು ಇತರ ಐವರ ವಿರುದ್ಧ ಐಪಿಸಿ ಕಲಂ 120,420 ಮತ್ತು 471ರಡಿ ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ 1988ರ ಕಲಂ 13 (1)ರಡಿ ಪ್ರಥಮ ವರ್ತಮಾನ ವರದಿ ಸಲ್ಲಿಸಿ ತನಿಖೆಯನ್ನು ಮುಗಿಸಿ ಎಲ್ಲಾ ಆರು ಮಂದಿ ಆರೋಪಿಗಳ ವಿರುದ್ಧ ಹೈದರಾಬಾದಿನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣಾ ಪತ್ರ ದಾಖಲಿಸಿತು.


ದಿನಾಂಕ 13.2.2018 ರಂದು ಪಿಸಿ ಅಕ್ಟ್ ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ಮೇಲ್ಮನವಿದಾರರನ್ನು ವಿಚಾರಣೆಗೆ ಒಳಪಡಿಸಲು ಪಿ.ಸಿ. ಆಕ್ಟ್ 1988 ರ ಸೆಕ್ಷನ್ 19ರ ಅಡಿಯಲ್ಲಿ ಮಂಜೂರಾತಿ ನೀಡುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಸಕ್ಷಮ ಪ್ರಾಧಿಕಾರಿಯಾಗಿರುವ ಮುಖ್ಯ ಜನರಲ್ ಮ್ಯಾನೇಜರ್ ರವರು ತಿರಸ್ಕರಿಸಿದರು. ತದನಂತರ ದಿನಾಂಕ 11.4.2018 ರಂದು ಮರುಪರಿಶೀಲನೆ ನಡೆಸಿ ಪ್ರಾಧಿಕಾರವು ಮಂಜೂರಾತಿಯನ್ನು ನೀಡಿತು. ಒಮ್ಮೆ ಮಂಜೂರಾತಿ ನೀಡಲು ನಿರಾಕರಿಸಿದ ಪ್ರಾಧಿಕಾರವು ತನ್ನ ಹಿಂದಿನ ಆದೇಶವನ್ನು ಮರುಪರಿಶೀಲಿಸಲು ಕಾನೂನಿನಡಿ ಅವಕಾಶವಿಲ್ಲ. ಆದುದರಿಂದ ಮಂಜೂರಾತಿ ಆದೇಶವನ್ನು ರದ್ದುಪಡಿಸಬೇಕೆಂದು ಎ. ಶ್ರೀನಿವಾಸ ರೆಡ್ಡಿ ಅವರು ಸಲ್ಲಿಸಿದ ರಿಟ್ ಅರ್ಜಿಯನ್ನು ಪುರಸ್ಕರಿಸಿದ ಹೈದರಾಬಾದ್ ನ ಹೈಕೋರ್ಟ್ ಆಫ್ ಜುಡಿಕೇಚರ್ ನ ಏಕ ಸದಸ್ಯ ಪೀಠವು ಸಕ್ಷಮ ಪ್ರಾಧಿಕಾರವು ನೀಡಿದ ಮಂಜೂರಾತಿ ಆದೇಶವನ್ನು ರದ್ದುಪಡಿಸಿತು. ಸದರಿ ಆದೇಶದ ವಿರುದ್ಧ ವಿಭಾಗಿಯ ಪೀಠದ ಸಮಕ್ಷಮ ಸಲ್ಲಿಸಲಾದ ರಿಟ್ ಅಪೀಲ್ ತಿರಸ್ಕರಿಸಲ್ಪಟ್ಟು ಏಕ ಸದಸ್ಯ ನ್ಯಾಯ ಪೀಠದ ಆದೇಶವು ಅನುಸಮರ್ಥಿಸಲ್ಪಟ್ಟಿತು.


ಹೈದರಾಬಾದ್ ನ ಹೈಕೋರ್ಟ್ ರಿಟ್ ಅರ್ಜಿಯಲ್ಲಿ ದಿನಾಂಕ 30.10.2018 ರಂದು ಹೊರಡಿಸಿದ ಆದೇಶ ಮತ್ತು ರಿಟ್ ಅಪೀಲ್ ನಲ್ಲಿ ದಿನಾಂಕ 15-2.2019 ರಂದು ಹೊರಡಿಸಿದ ಆದೇಶಗಳ ಅನುಸಾರವಾಗಿ ದಂಡ ಪ್ರಕ್ರಿಯೆ ಸಂಹಿತೆ ಕಲಂ 239 ಅಡಿ ತನ್ನನ್ನು ದೋಷ ಮುಕ್ತಗೊಳಿಸುವಂತೆ ವಿಶೇಷ ನ್ಯಾಯಾಲಯದ ಮುಂದೆ ಮೇಲ್ಮನವಿದಾರರು ಅರ್ಜಿ ಸಲ್ಲಿಸಿದರು.


ವಿಶೇಷ ನ್ಯಾಯಾಲಯವು 30.8.2019ರ ತನ್ನ ಆದೇಶದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ 1988ರಡಿ ಆರೋಪಿ ಶ್ರೀನಿವಾಸ್ ರೆಡ್ಡಿ ವಿರುದ್ಧ ಹೊರಿಸಿದ ಆರೋಪಗಳಿಂದ ಅವರನ್ನು ಬಿಡುಗಡೆಗೊಳಿಸಿತು. ಆದರೆ ಐಪಿಸಿ ಅಡಿಯಲ್ಲಿ ಹೊರಿಸಲಾದ ಆರೋಪಗಳ ವಿಚಾರಣೆಯಿಂದ ಮೇಲ್ಮನವಿದಾರರನ್ನು ಬಿಡುಗಡೆಗೊಳಿಸಲು ನಿರಾಕರಿಸಿತು. ವಿಶೇಷ ನ್ಯಾಯಾಲಯವು ಪ್ರಕಾಶ್ ಸಿಂಗ್ ಬಾದಲ್ ವಿರುದ್ಧ ಪಂಜಾಬ್ ರಾಜ್ಯ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿತು.


ಭಾರತೀಯ ದಂಡ ಸಂಹಿತೆ (ಐಪಿಸಿ)ಯ ನಿಬಂಧನೆಗಳಡಿ ಮೇಲ್ಮನವಿದಾರರ ವಿರುದ್ಧ ಹೊರಿಸಲಾದ ಆರೋಪಗಳ ವಿಚಾರಣೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಪ್ರಕರಣದ ಇತರ ಆರೋಪಿಗಳ ಜೊತೆಗೆ ಮೇಲ್ಮನವಿದಾರರ ವಿಚಾರಣೆ ಮುಂದುವರೆಯುವುದು. ಕಲಂ 197ರಡಿ ಸಕ್ಷಮ ಪ್ರಾಧಿಕಾರದ ಮಂಜೂರಾತಿ ಪಡೆಯುವ ಅವಶ್ಯಕತೆ ಇಲ್ಲ ಎಂಬ

ವಿಶೇಷ ನ್ಯಾಯಾಲಯದ ಆದೇಶದಿಂದ ಭಾದಿತರಾದ ಮೇಲ್ಮನವಿದಾರರು ಹೈದರಾಬಾದ್ ಹೈಕೋರ್ಟಿನಲ್ಲಿ ಕ್ರಿಮಿನಲ್ ಅರ್ಜಿ ಸಂಖ್ಯೆ 6782/ 2019 ದಾಖಲಿಸಿದರು. ಹೈದರಾಬಾದ್ ಹೈಕೋರ್ಟ್ ಆಫ್ ಚುಡಿಕೇಚರ್ ದಿನಾಂಕ 20-6-2022 ರ ತನ್ನ ಆದೇಶದಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿತು.


ಹೈಕೋರ್ಟ್ ಆದೇಶದಿಂದ ಭಾದಿತರಾದ ಮೇಲ್ಮನವಿದಾರರು ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿ ಕ್ರಿಮಿನಲ್ ಅಪೀಲ್ ಸಂಖ್ಯೆ 2339/2023 ದಾಖಲಿಸಿದರು. ಮೇಲ್ಮನವಿದಾರರ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಈ ಕೆಳಗಿನ ವಾದ ಮಂಡಿಸಲಾಯಿತು.


1. ದಂಡ ಪ್ರಕ್ರಿಯೆ ಸಂಹಿತೆ (ಸಿ.ಆರ್.ಪಿ.ಸಿ) ಸೆಕ್ಷನ್ 197 ರ ಅಡಿಯಲ್ಲಿ ಮಂಜೂರಾತಿ ಅವಶ್ಯಕತೆ ಇಲ್ಲದೆ ವಿಚಾರಣೆ ನಡೆಸುವುದು ಕಾನೂನಿನಡಿ ಊರ್ಜಿತವಲ್ಲ.


2. ಮೇಲ್ಮನವಿದಾರರನ್ನು ಇಲಾಖೆ ವಿಚಾರಣೆಗೆ ಒಳಪಡಿಸಲಾಗಿದ್ದು ದಿನಾಂಕ 9.6.2014 ರಂದು ವಿಚಾರಣಾಧಿಕಾರಿಯವರು ನೀಡಿದ ವರದಿ ಅನ್ವಯ ಆರೋಪಗಳು ಸಾಬೀತಾಗಿಲ್ಲ.


3. ಭಾರತೀಯ ದಂಡ ಸಂಹಿತೆ (ಐಪಿಸಿ) ಯಡಿ ಎಸಗಿದ್ದಾರೆ ಎನ್ನಲಾದ ಆರೋಪಗಳ ಕುರಿತು ಸಕ್ಷಮ ಪ್ರಾಧಿಕಾರದ ಮಂಜೂರಾತಿ ಇಲ್ಲದೆ ವಿಚಾರಣೆ ನಡೆಸುವುದು ಕಾನೂನಿನಡಿ ಊರ್ಜಿತವಲ್ಲ.


ಕೇಂದ್ರೀಯ ತನಿಖಾ ದಳದ (ಸಿಬಿಐ) ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು.


1. ಪಿ.ಸಿ.ಆಕ್ಟ್ ಸೆಕ್ಷನ್ 19 ರಡಿ ಪೂರ್ವ ಮಂಜೂರಾತಿ ಅವಶ್ಯಕ ಎನ್ನುವ ಸಿದ್ಧಾಂತವನ್ನು ಐಪಿಸಿ ಅಡಿ ಎಸಗಲಾದ ಶಿಕ್ಷಾರ್ಹ ಅಪರಾಧಗಳಿಗೆ ಅನ್ವಯಿಸುವಂತಿಲ್ಲ.


2. ಸಿ.ಆರ್.ಪಿ.ಸಿ ಯ ಸೆಕ್ಷನ್ 197 ರ ಅಡಿಯಲ್ಲಿ ಅಗತ್ಯವಿರುವ ಮಂಜೂರಾತಿ ಮತ್ತು ಪಿ ಸಿ ಅಕ್ಟ್ 1988ರ ಅಡಿಯಲ್ಲಿ ಅಗತ್ಯವಿರುವ ಮಂಜೂರಾತಿ ವಿಭಿನ್ನ ತಳಹದಿಯ ಮೇಲೆ ನಿಂತಿದೆ.


3. ಸಿ.ಆರ್.ಪಿ.ಸಿ ಸೆಕ್ಷನ್ 197 ರಡಿ ಅನುಮತಿ ಕೋರಿ ಸಿಬಿಐ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿಲ್ಲ.ಆದರೆ ಪಿ ಸಿ ಆಕ್ಟ್ ನ ಸೆಕ್ಷನ್ 19 ರಡಿ ಮಂಜೂರಾತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಮಂಜೂರಾತಿಗೆ ಸಂಬಂಧಿಸಿದ ಸಮಸ್ಯೆಯನ್ನು ಒಂದರ ಜೊತೆ ಇನ್ನೊಂದು ಹೊಂದಿಸಿರುವುದು ಸಮಂಜಸವಲ್ಲ.


ಬ್ಯಾಂಕಿನ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು.


I.ಪಿ.ಸಿ.ಆಕ್ಟ್ 1988 ರ ಸೆಕ್ಷನ್ 19 ರ ಅಡಿಯಲ್ಲಿ ಪ್ರಾರಂಭದಲ್ಲಿ ವಿಚಾರಣೆಗೆ ಅನುಮತಿ ನಿರಾಕರಿಸಿದ್ದರೂ, ಮರು ಪರಿಶೀಲನೆ ನಡೆಸಿ ನಂತರ ಅನುಮತಿ ನೀಡಲಾಗಿದೆ.


II. ಮೇಲ್ಮನವಿದಾರರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯಲ್ಲಿಅವರನ್ನು ದೋಷ ಮುಕ್ತಗೊಳಿಸಲಾಗಿದೆ ಎಂಬುದು ತಪ್ಪು ಮಾಹಿತಿಯಾಗಿದೆ. ಬ್ಯಾಂಕ್ ಅಧಿಕಾರಿಗೆ ತರವಲ್ಲದ ವರ್ತನೆ ತೋರಿ ತನ್ನ ಕರ್ತವ್ಯಗಳನ್ನು ಶ್ರದ್ದೆಯಿಂದ ನಿರ್ವಹಿಸದ್ದಕ್ಕಾಗಿ ಮತ್ತು ಬ್ಯಾಂಕಿಗೆ ಹೆಚ್ಚಿನ ಆರ್ಥಿಕ ಹಾನಿಯನ್ನು ಉಂಟುಮಾಡುವ ರೀತಿಯಲ್ಲಿ ವರ್ತಿಸಿದ ಕಾರಣಕ್ಕಾಗಿ *ಆಡಳಿತಾತ್ಮಕ ಎಚ್ಚರಿಕೆ* ಎಂಬ ದಂಡನೆಯನ್ನು ವಿಧಿಸಲಾಗಿದೆ.


III.ಇಲಾಖಾ ವಿಚಾರಣೆಯು ಕ್ರಿಮಿನಲ್ ಪ್ರಕರಣದ ವಿಚಾರಣೆಗಿಂತ ಭಿನ್ನವಾಗಿದ್ದು ಎರಡೂ ವಿಚಾರಣೆಗಳು ಸ್ವತಂತ್ರ ವಿಚಾರಣೆಗಳಾಗಿವೆ. ಆದುದರಿಂದ ಮೇಲ್ಮನವಿದಾರನು ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಇಲಾಖಾ ವಿಚಾರಣೆಯ ಫಲಿತಾಂಶವನ್ನು ಅವಲಂಬಿಸುವಂತಿಲ್ಲ.


IV. ಬ್ಯಾಂಕಿನ ಪರವಾಗಿ ಮಂಡಿಸಲಾದ ಇನ್ನೊಂದು ಪ್ರಮುಖ ವಾದವೇನೆಂದರೆ ಸಿ.ಆರ್.ಪಿ.ಸಿ.ಯ ಸೆಕ್ಷನ್ 197 ರಡಿ ಪೂರ್ವಾನುಮತಿಯು ಸರಕಾರವು ಸೇವೆಯಿಂದ ತೆರವುಗೊಳಿಸಬಹುದಾದ ಸಾರ್ವಜನಿಕ ಸೇವಕರಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಸೇವೆಯಿಂದ ತೆರವುಗೊಳಿಸಲು ಸರಕಾರದ ಅನುಮತಿ ಅವಶ್ಯಕತೆ ಇಲ್ಲದ ಬ್ಯಾಂಕಿನ ಅಧಿಕಾರಿಯಾಗಿರುವ ಮೇಲ್ಮನವಿದಾರರಿಗೆ ಅನ್ವಯಿಸುವುದಿಲ್ಲ.


ಯಾವುದೇ ಅರ್ಹತೆಯ ಅಂಶಗಳು ಇಲ್ಲವಾದ್ದರಿಂದ ಮೇಲ್ಮನವಿಯನ್ನು ತಿರಸ್ಕರಿಸಬೇಕೆಂದು ಬ್ಯಾಂಕಿನ ಪರವಾಗಿ ಪ್ರಾರ್ಥಿಸಲಾಯಿತು.


ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಪಕ್ಷಕಾರರ ವಾದ ಆಲಿಸಿದ ನ್ಯಾಯ ಪೀಠವು ಈ ಕೆಳಗಿನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.


ಮೇಲ್ಮನವಿದಾರನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸುವ ಸಾರ್ವಜನಿಕ ಸೇವಕನಾಗಿದ್ದರೂ ಸಿಆರ್ಪಿಸಿಯ ಸೆಕ್ಷನ್ 197 ರ ನಿಬಂಧನೆಗಳು ಆತನಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಯಾವ ಸಾರ್ವಜನಿಕ ಸೇವಕನನ್ನು ಸೇವೆಯಿಂದ ತೆರವುಗೊಳಿಸಲು ಸರಕಾರದ ಅನುಮತಿ ಅವಶ್ಯಕತೆ ಇದೆಯೋ ಅಂತಹ ಸಂದರ್ಭದಲ್ಲಿ ಮಾತ್ರ ಸೆಕ್ಷನ್ 197 ರ ನಿಬಂಧನೆಗಳು ಅನ್ವಯಿಸುತ್ತವೆ.


ಐಪಿಸಿ ಅಡಿಯಲ್ಲಿ ಎಸಗಿದ ಅಪರಾಧಗಳಿಗಾಗಿ ಒಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲು ಅಗತ್ಯವಿರುವ ಮಂಜೂರಾತಿ ಆದೇಶ ಮತ್ತು ಪಿ ಸಿ ಆಕ್ಟ್ 1988ರ ಅಡಿಯಲ್ಲಿ ಎಸಗಿದ ಅಪರಾಧಗಳಿಗೆ ಅಗತ್ಯವಿರುವ ಮಂಜೂರಾತಿ ಆದೇಶದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಸೆಕ್ಷನ್ 197 ಮತ್ತು ಪಿ ಸಿ ಅಕ್ಟ್ ನ ಸೆಕ್ಷನ್ 19 ಕಲ್ಪನಾತ್ಮಕವಾಗಿ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಪಿ ಸಿ ಅಕ್ಟ್ ನ ಸೆಕ್ಷನ್ 19ರ ಅಡಿ ಪೂರ್ವಾನುಮತಿ ಪಡೆಯಬೇಕೆನ್ನುವ ಹಿಂದಿರುವ ಮುಖ್ಯ ಅಂಶವೇನೆಂದರೆ ಸಾರ್ವಜನಿಕ ನೌಕರರ ವಿರುದ್ಧ ಸುಳ್ಳು ಆರೋಪಗಳ ಆಧಾರದಲ್ಲಿ ಕಾನೂನು ಕ್ರಮ ಕೈಗೊಳ್ಳುವುದರಿಂದ ಅವರನ್ನು ರಕ್ಷಿಸುವುದೇ ಆಗಿದೆ. ಆದರೆ ಐಪಿಸಿ ಅಡಿಯಲ್ಲಿ ಎಸಗಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಂಜೂರಾತಿಯ ಅಗತ್ಯವಿದೆ ಎಂಬುದು ಆಯಾ ಪ್ರಕರಣದ ವಾಸ್ತವಿಕ ಅಂಶಗಳನ್ನು ಅವಲಂಬಿಸಿರುತ್ತದೆ.


ಐಪಿಸಿ ಕಾನೂನಿನಡಿ ಶಿಕ್ಷಾರ್ಹ ಅಪರಾಧ ಮಾಡುವುದು ಸಾರ್ವಜನಿಕ ಸೇವಕನ ಅಧಿಕೃತ ಕರ್ತವ್ಯದ ಭಾಗವಾಗಿರುವುದಿಲ್ಲ. ಅಧಿಕೃತ ಕರ್ತವ್ಯದ ನಿರ್ವಹಣೆಯನ್ನು ಕಾನೂನುಬಾಹಿರ ಕೃತ್ಯಗಳಿಗೆ ಹೊದಿಕೆಯಾಗಿ ಬಳಸಲಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠವು ಮೇಲ್ಮನವಿಯನ್ನು ತಿರಸ್ಕರಿಸಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




Ads on article

Advertise in articles 1

advertising articles 2

Advertise under the article