ಕೇವಲ ಐದು ದಿನ ರಜೆಗೆ ಶಿಕ್ಷಕಿಯ ತಲೆದಂಡ: ನ್ಯಾಯಮಂಡಳಿ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಕೇವಲ ಐದು ದಿನ ರಜೆಗೆ ಶಿಕ್ಷಕಿಯ ತಲೆದಂಡ: ನ್ಯಾಯಮಂಡಳಿ ಆದೇಶ ಎತ್ತಿ ಹಿಡಿದ ಹೈಕೋರ್ಟ್
"ಐದು ದಿನಗಳ ಕಾಲ ಗೈರು ಹಾಜರಾಗಿದ್ದರು" ಎಂಬ ಕಾರಣಕ್ಕೆ ಶಿಕ್ಷಕಿಯಿಂದ ಸೇವೆಯಿಂದ ಡಿಬಾರ್ ಮಾಡಿದ ಶೈಕ್ಷಣಿಕ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಧಾರ ಸಮರ್ಪಕವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.
ಈ ಮೂಲಕ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ನ್ಯಾಯಪೀಠ ಪುನರುಚ್ಚರಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರ್. ಸುಜಾತಮ್ಮ ಅವರು ವಿಭಾಗೀಯ ಪೀಠದ ಮೊರೆ ಹೋಗಿದ್ದರು.
ಘಟನೆ ಏನು..?
ರಾಜಾಜಿ ನಗರದ ಇ ಬ್ಲಾಕ್‌ನಲ್ಲಿ ಇರುವ ವಾಣಿ ವಿದ್ಯಾಕೇಂದ್ರದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್. ಸುಜಾತಮ್ಮ (56) ಅವರನ್ನು 22-7-2023ರಂದು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಸುಜಾತಮ್ಮ ತಮ್ಮ ಪುತ್ರಿಯ ಅನಾರೋಗ್ಯದ ಕಾರಣ ನೀಡಿ ದೀರ್ಘ ಕಾಲದ ರಜೆ ಪಡೆಯುತ್ತಿದ್ದರು. ಅಂತೆಯೇ ಅವರ ಬೋಧನಾ ಮಟ್ಟವೂ ತೃಪ್ತಿಕರವಾಗಿರಲಿಲ್ಲ.
ಐದು ದಿನಗಳ ರಜೆ ಪಡೆದಿದ್ದ ಅವರಿಗೆ ಆಡಳಿತ ಮಂಡಳಿ ನೋಟೀಸ್ ಜಾರಿಗೊಳಿಸಲಾಗಿತ್ತು. ಈ ನೋಟೀಸ್‌ಗೆ ಸುಜಾತಮ್ಮ ಅವರು ಯಾವುದೇ ಪ್ರತ್ಯುತ್ತರ ಯಾ ವಿವರಣೆ ನೀಡಿರಲಿಲ್ಲ. ಈ ಕಾರಣಕ್ಕೆ ಸಂಸ್ಥೆಯು ಅವರನ್ನು ಸೇವೆಯಿಂದ ಬಿಡುಗಡೆ ಮಾಡಿತ್ತು.
ಇದನ್ನು ಪ್ರಶ್ನಿಸಿ ಸುಜಾತಮ್ಮ ಶೈಕ್ಷಣಿಕ ನ್ಯಾಯಮಂಡಳಿ ,ಮೊರೆ ಹೋಗಿ, ಅಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮಂಡಳಿ, ಅರ್ಜಿದಾರರು ಖಾಯಂ ಉದ್ಯೋಗಿ ಅಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಸಂಸ್ಥೆಯ ನಿರ್ಧಾರ ಸರಿಯಾಗಿದೆ ಎಂದು ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಸುಜಾತಮ್ಮ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕಸದಸ್ಯ ಪೀಠ ಕೂಡ ನ್ಯಾಯಮಂಡಳಿ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು.