ಸುದೀರ್ಘ ಜೈಲು ವಾಸ: ಕ್ಷಿಪ್ರ ವಿಚಾರಣೆ ಇಲ್ಲದಿದ್ದರೆ ಆರೋಪಿಗೆ ಜಾಮೀನು ನೀಡಬೇಕು- ಹೈಕೋರ್ಟ್
ಸುದೀರ್ಘ ಜೈಲು ವಾಸ: ಕ್ಷಿಪ್ರ ವಿಚಾರಣೆ ಇಲ್ಲದಿದ್ದರೆ ಆರೋಪಿಗೆ ಜಾಮೀನು ನೀಡಬೇಕು- ಹೈಕೋರ್ಟ್
ಸುದೀರ್ಘ ಕಾಲ ಜೈಲು ವಾಸ ಅನುಭವಿಸಿದ ಆರೋಪಿಗಳಿಗೆ ಜಾಮೀನು ನೀಡಬೇಕು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಅಂತಹ ಅರೋಪಿಗಳ ವಿರುದ್ಧ ಗಂಭೀರ ಸ್ವರೂಪದ ಆರೋಪ ಇದ್ದಾಗಲೂ ನ್ಯಾಯಾಲಯಗಳು ಆರೋಪಿಗಳ ಜಾಮೀನು ಅರ್ಜಿಯನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿದೆ.
'ಆಕಾಶ್ ಸತೀಶ್ ಚಾಂಡಾಲಿಯಾ Vs ಮಹಾರಾಷ್ಟ್ರ' ಪ್ರಕರಣದಲ್ಲಿ ನ್ಯಾ. ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ವಿಚಾರಣಾಧೀನ ಖೈದಿಗಳು ದೀರ್ಘ ಕಾಲದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದರೆ ಅವರ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದ್ದರೂ ಜಾಮೀನು ನೀಡುವಲ್ಲಿ ನ್ಯಾಯಾಲಯಗಳು ಅಸ್ಥೆ ವಹಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಸದ್ರಿ ಪ್ರಕರಣದಲ್ಲಿ ಆರೋಪಿ ವಿರುದ್ಧ ಜೋಡಿ ಕೊಲೆಯ ಆರೋಪ ಹೊರಿಸಲಾಗಿದೆ. ಆರೋಪಿ ಸತೀಶ್ ಚಾಂಡಾಲಿಯಾ ಕಳೆದ ಏಳೂವರೆ ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದಾನೆ.
ತ್ವರಿತ ವಿಚಾರಣೆ ನಡೆಯುತ್ತದೆ ಎಂಬ ಖಾತ್ರಿ ಇಲ್ಲದಿದ್ದಾಗ ಆಗ ಅದು ವ್ಯಕ್ತಿ(ಆರೋಪಿ)ಯ ಸಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದಂತೆ. ಇಂತಹ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನಿರಾಕರಿಸಿದರೆ ಅದು ಭಾರತದ ಸಂವಿಧಾನದ 21ನೇ ವಿಧಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅನುಗುಣವಾಗಿರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದೇ ಪ್ರಕರಣದ ಇಬ್ಬರು ಸಹ ಆರೋಪಿಗಳನ್ನು ನ್ಯಾಯಾಲಯ 2022ರಲ್ಲಿ ಬಿಡುಗಡೆ ಮಾಡಿತ್ತು. ವಿಚಾರಣೆ ವಿಳಂಬ ಆಗುತ್ತಿರುವ ಕಾರಣ ಈ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ಮಾನ್ಯ ನ್ಯಾಯಾಲಯ ಗಮನಿಸಿತು. ಅದರಂತೆ ಚಾಂಡಾಲಿಯಾ ಅವರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.