MRP ಮೀರಿ ದರ ನಿಗದಿ- ಪಾನೀಯ ಖರೀದಿಸಿದ ವಕೀಲರಿಗೆ ಪರಿಹಾರ: ರೆಸ್ಟೋರೆಂಟ್‌ಗೆ ಗ್ರಾಹಕ ನ್ಯಾಯಾಲಯ ಆದೇಶ
MRP ಮೀರಿ ದರ ನಿಗದಿ- ಪಾನೀಯ ಖರೀದಿಸಿದ ವಕೀಲರಿಗೆ ಪರಿಹಾರ: ರೆಸ್ಟೋರೆಂಟ್‌ಗೆ ಗ್ರಾಹಕ ನ್ಯಾಯಾಲಯ ಆದೇಶ
ಗರಿಷ್ಟ ಚಿಲ್ಲರೆ ದರ(Maximum Retail Price- MRP)ಕ್ಕಿಂತಲೂ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆಯಬಾರದು. ಈ ನಿಯಮವನ್ನು ಉಲ್ಲಂಘಿಸಿ ಗ್ರಾಹಕರಿಂದ ಹೆಚ್ಚಿನ ಬೆಲೆಯನ್ನು ಪಡೆದ ರೆಸ್ಟೋರೆಂಟ್‌ಗೆ ದಂಡ ವಿಧಿಸಿ ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.
ಆಯೋಗದ ಅಧ್ಯಕ್ಷೆ ಜಿ.ಟಿ. ವಿಜಯಲಕ್ಷ್ಮಿ ಅವರು ಈ ಆದೇಶ ಹೊರಡಿಸಿದ್ದಾರೆ.
ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯನ್ನು ವಿಧಿಸಿ ತಂಪು ಪಾನೀಯ ಮಾರಾಟ ಮಾಡಿದ್ದ ತುಮಕೂರಿನ ವೈಷ್ಣವಿ ಡೀಲಕ್ಸ್ ಕಂಫರ್ಟ್ಸ್ ವಿರುದ್ಧ ಗ್ರಾಹಕರಾದ ವಕೀಲ ನಂದೀಶ್ ಅವರು ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗ, ನೀರಿನ ಬಾಟಲ್ ಮತ್ತು ತಂಪು ಪಾನೀಯ ಮಾರಾಟ ಮಾಡಿದ್ದ ವೈಷ್ಣವಿ ಡೀಲಕ್ಸ್ ಕಂಫರ್ಟ್ಸ್‌ಗೆ ದಂಡ ವಿಧಿಸಿ ತೀರ್ಪು ನೀಡಿದೆ. ಗ್ರಾಹಕರಿಗೆ ಮಾನಸಿಕ ಯಾತನೆ ವಿಧಿಸಿದ್ದಕ್ಕೆ ರೂ. 4000/- ಕಾನೂನು ವೆಚ್ಚವಾಗಿ ರೂ. 3000/- ಮೊತ್ತವನ್ನು ತೀರ್ಪು ಸ್ವೀಕರಿಸಿದ 30 ದಿನಗಳ ಒಳಗಾಗಿ ಗ್ರಾಹಕರಿಗೆ ಪಾವತಿಸುವಂತೆ ಆಯೋಗ ನಿರ್ದೇಶಿಸಿದೆ.
ಕಾನೂನು ಮಾಪನ (ಪ್ಯಾಕ್ ಮಾಡಿದ ವಸ್ತುಗಳು) ನಿಯಮಾವಳಿ 2011ರ ಪ್ರಕಾರ ನಿಗದಿತ ಚಿಲ್ಲರೆ ಮಾರಾಟ ದರಕ್ಕಿಂತ ಹೆಚ್ಚಿನ ದರವನ್ನು ವಿಧಿಸುವಂತಿಲ್ಲ. ಈ ನಿಯಮ ಎಲ್ಲ ಚಿಲ್ಲರೆ ಯಾ ಡೀಲರ್ ಹಾಗೂ ಇತರ ವ್ಯಕ್ತಿಗಳಿಗೂ ಅನ್ವಯವಾಗಲಿದೆ. ಇದರಿಂದ ಹೊಟೇಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಹೊರತಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಗ್ರಾಹಕ ನಂದೀಶ್ ನೀಡಿದ್ದ ಲೀಗಲ್ ನೋಟೀಸ್ ಮತ್ತು ಆಯೋಗ ನೀಡಿದ ಸಮ್ಮನ್ಸ್ ನೋಟೀಸ್‌ನ್ನು ರೆಸ್ಟೋರೆಂಟ್ ಮಾಲೀಕರು ಸ್ವೀಕರಿಸಿದ್ದರೂ ಆಯೋಗದ ಮುಂದೆ ಹಾಜರಾಗಿರಲಿಲ್ಲ.
ರೆಸ್ಟೋರೆಂಟ್‌ಗೆ ನಿಯಮಿತವಾಗಿ ಭೇಟಿ ನೀಡಿ ಆಹಾರ, ಖಾದ್ಯ ತಿನಸು ಖರೀದಿಸುತ್ತಿದ್ದ ವಕೀಲರಾದ ನಂದೀಶ್ ಮೇ 19, 2023ರಂದು ಆಹಾರ ಮತ್ತು ಪಾನೀಯ ಖರೀದಿಸಿದ್ದರು.
ತಂಪು ಪಾನೀಯ ಮತ್ತು ನೀರಿನ ಬಾಟಲ್‌ನ್ನು ಶೇ. 5ರ ಜಿಎಸ್‌ಟಿ ಜೊತೆಗೆ ಗರಿಷ್ಟ ಮಾರಾಟ ದರಕ್ಕಿಂತ ಶೇ. 25ಕ್ಕಿಂತಲೂ ಹೆಚ್ಚಿನ ಹಣ ಪಡೆದಿದ್ದಾರೆ ಎಂದು ನಂದೀಶ್ ದೂರಿದ್ದರು.