ಕುಡಿದು ಡ್ಯೂಟಿ ಮಾಡಿ ಕಂಡಕ್ಟರ್‌ನ ವೇತನ ಕಡಿತ: BMTC ನಿರ್ಧಾರ ಸರಿ ಎಂದ ಹೈಕೋರ್ಟ್
ಕುಡಿದು ಡ್ಯೂಟಿ ಮಾಡಿ ಕಂಡಕ್ಟರ್‌ನ ವೇತನ ಕಡಿತ: BMTC ನಿರ್ಧಾರ ಸರಿ ಎಂದ ಹೈಕೋರ್ಟ್
ಕರ್ತವ್ಯದ ಸಮಯದಲ್ಲಿ ಕುಡಿದು ಸೇವೆ ಸಲ್ಲಿಸಿದ್ದಲ್ಲದೆ ಪ್ರಯಾಣಿಕರೊಂದಿಗೆ ದುರ್ನಡತೆ ತೋರಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ವಾಹಕ ಎಚ್.ಬಿ. ಸಿದ್ದರಾಜಯ್ಯ ಅವರ ಮೂಲವೇತನ ಪ್ರಮಾಣ ಕಡಿಮೆ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ನ್ಯಾ. ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಸಿದ್ದರಾಜಯ್ಯ ಅವರ ಮೂಲ ವೇತನ ಪ್ರಮಾಣ ಕಡಿಮೆ ಮಾಡಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯ ತನ್ನ ಆದೇಶವನ್ನು ಕೈಗಾರಿಕಾ ನ್ಯಾಯಮಂಡಳಿ ಮಾರ್ಪಾಡು ಮಾಡಿತ್ತು. ನ್ಯಾಯಮಂಡಳಿಯ ಆದೇಶದ ವಿರುದ್ಧ ಬಿಎಂಟಿಸಿ ಹೈಕೋರ್ಟ್ ಮೊರೆ ಹೋಗಿ ಮೇಲ್ಮನವಿ ಸಲ್ಲಿಸಿತ್ತು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ನ್ಯಾಯಮಂಡಳಿಯ ತೀರ್ಪನ್ನು ರದ್ದುಪಡಿಸಿತು.
ಬಸ್ ಸೇವೆಯನ್ನು ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವುದು ಕಂಡಕ್ಟರ್ ಜವಾಬ್ದಾರಿ. ಟಿಕೆಟ್ ನೀಡಿ ಹಣ ಪಡೆಯುವುದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸಿಕೊಳ್ಳುವುದು, ಪ್ರಯಾಣಿಕರಿಗೆ ಸೂಕ್ತ ಸಹಕಾರ ನೀಡುವುದು ಮತ್ತು ಮಾಹಿತಿ ಒದಗಿಸುವುದು ಸಾರ್ವಜನಿಕ ಸಾರಿಗೆ ನಿಗಮದ ಸಿಬ್ಬಂದಿಯಾಗಿ ನಿರ್ವಾಹಕನ ಜವಾಬ್ದಾರಿಯಾಗಿದೆ.
ಆದರೆ, ಈ ಪ್ರಕರಣದಲ್ಲಿ ನಿರ್ವಾಹಕ ಸಿದ್ದರಾಜಯ್ಯ ದುಃಸ್ವಪ್ನದಲ್ಲೂ ಕಾಡಿದ್ದಾರೆ. ಉದ್ಯೋಗ/ಕರ್ತವ್ಯದಲ್ಲಿ ಇದ್ದಾಗಲೇ ಮದ್ಯಸೇವನೆ ಮಾಡಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಸರಿಯಲ್ಲ. ಹಾಗಾಗಿ BMTC ತನ್ನ ಸಿಬ್ಬಂದಿಯ ಮೂಲವೇತನ ಕಡಿತ ಮಾಡಿರುವ ಆದೇಶ ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
2006ರ ಜುಲೈ 11ರಂದು BMTC ಬಸ್ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಸಿದ್ದರಾಜಯ್ಯ ಮದ್ಯ ಸೇವನೆ ಮಾಡಿದ್ದರು ಮತ್ತು ಕರ್ತವ್ಯದಲ್ಲಿ ಇದ್ದಾಗ ಪ್ರಯಾಣಿಕರ ಜೊತೆಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಪ್ರಯಾಣಿಕರು ದೂರು ಸಲ್ಲಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಸಿದ್ದರಾಜಯ್ಯ ಮದ್ಯಪಾನ ಸೇವನೆ ಮಾಡಿರುವುದು ದೃಢಪಟ್ಟಿತ್ತು.