ಶಿಸ್ತುಕ್ರಮ ರಹಿತ ನೌಕರನ ಗೈರುಹಾಜರಿ ಅನಧಿಕೃತವೇ? ಶಿಸ್ತುಪಾಲನಾಧಿಕಾರಿಗಳ ಪಾತ್ರವೇನು..?: ಹೈಕೋರ್ಟ್ ಮಹತ್ವದ ತೀರ್ಪು
ಶಿಸ್ತುಕ್ರಮ ರಹಿತ ನೌಕರನ ಗೈರುಹಾಜರಿ ಅನಧಿಕೃತವೇ? ಶಿಸ್ತುಪಾಲನಾಧಿಕಾರಿಗಳ ಪಾತ್ರವೇನು..?: ಹೈಕೋರ್ಟ್ ಮಹತ್ವದ ತೀರ್ಪು
ಶಿಸ್ತುಕ್ರಮ ಜರುಗಿಸದಿದ್ದರೆ ನೌಕರನ ಗೈರುಹಾಜರಿಯನ್ನು ಅನಧಿಕೃತವೆಂದು ಪರಿಗಣಿಸಲಾಗದು - ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸರಕಾರಿ ನೌಕರರನು ಯಾವುದೇ ರಜೆಯನ್ನು ಮಂಜೂರು ಮಾಡಿಸಿಕೊಳ್ಳದೆ ಕರ್ತವ್ಯಕ್ಕೆ ಗೈರುಹಾಜರಾದಾಗ ಆತನ ಗೈರುಹಾಜರಿಯನ್ನು ಅನಧಿಕೃತವೆಂದು ಪರಿಗಣಿಸಬೇಕಾದರೆ ಸಕ್ಷಮ ಪ್ರಾಧಿಕಾರ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರಬೇಕು ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅಲೋಕ್ ಆರಾಧೆ ಮತ್ತು ನ್ಯಾ. ವಿಜಯಕುಮಾರ್ ಎ. ಪಾಟೀಲ್ ಇವರನ್ನು ಒಳಗೊಂಡ ವಿಭಾಗಿಯ ನ್ಯಾಯ ಪೀಠವು "ಮುಖ್ಯ ಶಿಕ್ಷಕರು, ಶ್ರೀ ರಾಘವೇಂದ್ರ ಆಶ್ರಮ ಶಾಲೆ Vs ಎನ್.ಎಸ್. ಕಾಂತರಾಜು ಮತ್ತಿತರರು" ಪ್ರಕರಣದಲ್ಲಿ 20.02.2023ರಂದು ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ:
ಶ್ರೀ ಎನ್. ಎಸ್. ಕಾಂತರಾಜು ಎಂಬುವರು ಬೆಂಗಳೂರಿನ ಶ್ರೀ ಭಗಿನಿ ನಿವೇದಿತಾ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶಿಕ್ಷಣ ಇಲಾಖೆಯು 2009ರಲ್ಲಿ ಶ್ರೀ ಕಾಂತರಾಜು ಅವರನ್ನು ಬೊಮ್ಮಸಂದ್ರದ ಶ್ರೀ ರಾಘವೇಂದ್ರ ಆಶ್ರಮ ಶಾಲೆಗೆ ವರ್ಗಾಯಿಸಿತು.
2009ರ ಫೆಬ್ರವರಿ 2 ರಂದು ಒಂದು ದಿನ ಕರ್ತವ್ಯಕ್ಕೆ ಹಾಜರಾದ ಶ್ರೀ ಕಾಂತರಾಜು ನಂತರ ಇಡೀ ವರ್ಷ ಅಂದರೆ 3.2.2009 ರಿಂದ 15.2.2010 ರ ವರೆಗೆ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಒಂದು ವರ್ಷದ ಬಳಿಕ ಕರ್ತವ್ಯಕ್ಕೆ ಹಾಜರಾದರು.
ಈ ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಇಲಾಖೆ ಅವರ ಗೈರುಹಾಜರಿಯನ್ನು ಅನಧಿಕೃತ ಗೈರಹಾಜರಿಯೆಂದು ಪರಿಗಣಿಸಿ ಯಾವುದೇ ವೇತನ ನೀಡಿರಲಿಲ್ಲ.
ಈ ಘಟನೆ ನಡೆದು ನಾಲ್ಕು ವರ್ಷಗಳು ಕಳೆದ ಬಳಿಕ ಕಾಂತರಾಜು ಅವರು ಬೆಂಗಳೂರು ಉತ್ತರ ತಾಲೂಕಿನ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಒಂದು ಮನವಿ ಪತ್ರ ಸಲ್ಲಿಸಿ, ತಾನು 2.2.2009 ರಿಂದ 15.2.2009ರ ವರೆಗೆ ರಜೆಯ ಮೇಲೆ ತೆರಳಿದ್ದು ನನ್ನ ಗೈರು ಹಾಜರಿಂದು ಅನಧಿಕೃತವೆಂದು ಪರಿಗಣಿಸಿ ವೇತನ ನೀಡಿಲ್ಲ. ಆದುದರಿಂದ ವೇತನ ಮತ್ತು ಭತ್ಯೆ ಪಾವತಿಸಲು ಆದೇಶಿಸಬೇಕೆಂದು ಮನವಿ ಮಾಡಿದ್ದರು.
ಆದರೆ ಶಿಕ್ಷಣಾಧಿಕಾರಿಯವರು ಸದರಿ ಮನವಿಯನ್ನು ಪುರಸ್ಕರಿಸದೆ ಇದ್ದುದರಿಂದ ಕಾಂತರಾಜು ಅವರು ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ 8345/2015 ದಾಖಲಿಸಿದರು.
ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಪಿ.ಬಿ.ಭಜಂತ್ರಿ ಅವರ ಏಕ ಸದಸ್ಯ ನ್ಯಾಯಪೀಠವು ರಿಟ್ ಅರ್ಜಿಯ ವಿಚಾರಣೆ ನಡೆಸಿ ಅರ್ಜಿದಾರನು ಒಂದು ವರ್ಷ ಕಾಲ ಗೈರು ಹಾಜರಾಗಿದ್ದರೂ ಶ್ರೀ ರಾಘವೇಂದ್ರ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರು ಯಾವುದೇ ಸೂಕ್ತ ಶಿಸ್ತು ಕ್ರಮ ಕೈಗೊಳ್ಳದೆ ಇರುವುದರಿಂದ ಅರ್ಜಿದಾರನ ಗೈರುಹಾಜರಿಯನ್ನು ಅನಧಿಕೃತ ಗೈರಹಾಜರಿಯೆಂದು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
ಅರ್ಜಿದಾರನನ್ನು ಅಮಾನತ್ತಿನಲ್ಲಿ ಇಡುವುದರ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅರ್ಜಿದಾರನ ವಿರುದ್ಧ ಇದುವರೆಗೂ ಯಾವುದೇ ವಿಚಾರಣೆ ನಡೆದಿಲ್ಲ. ಆತನನ್ನು ದಿನಾಂಕ 14.2.2009 ರಂದು ಶ್ರೀ ಭಗಿನಿ ನಿವೇದಿತಾ ಪ್ರೌಢಶಾಲೆಗೆ ಮರು ವರ್ಗಾವಣೆ ಮಾಡಲಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಪ್ರಕರಣದ ಸಂಗತಿಗಳನ್ನು ಹಾಗೂ ಸನ್ನಿವೇಶಗಳನ್ನು ಅವಲೋಕಿಸಿದಾಗ ಶ್ರೀ ಕಾಂತರಾಜು ಸಲ್ಲಿಸಿದ ರಿಟ್ ಅರ್ಜಿ ಪುರಸ್ಕರಿಸಲು ಯೋಗ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠವು ಕಾಂತರಾಜು ಅವರಿಗೆ ಗೈರುಹಾಜರಾಗಿದ್ದ ಅವಧಿಯ ವೇತನವನ್ನು 8 ಶೇಕಡಾ ಬಡ್ಡಿಯೊಂದಿಗೆ ಶ್ರೀ ರಾಘವೇಂದ್ರ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರು ಪಾವತಿಸಬೇಕೆಂಬ ಆದೇಶ ಹೊರಡಿಸಿತು.
ಸದರಿ ಆದೇಶದಿಂದ ಭಾದಿತರಾದ ರಾಘವೇಂದ್ರ ಆಶ್ರಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ರಿಟ್ ಅಪೀಲ್ ಸಂಖ್ಯೆ 7/2021 ದಾಖಲಿಸಿದರು. ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅಲೋಕ್ ಆರಾಧೆ ಮತ್ತು ಶ್ರೀ ವಿಜಯಕುಮಾರ್ ಎ. ಪಾಟೀಲ್ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅನುಸಮರ್ಥಿಸಿ ನೌಕರನ ವಿರುದ್ಧ ಶಿಸ್ತುಕ್ರಮ ಜರುಗಿಸದೆ ಇದ್ದಲ್ಲಿ ಆತನು ಅನಧಿಕೃತವಾಗಿ ಗೈರು ಹಾಜರಾಗಿದ್ದಾನೆ ಎಂಬ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯದೊಂದಿಗೆ ರಿಟ್ ಅಪೀಲನ್ನು ತಿರಸ್ಕರಿಸಿತು.
ಅನಧಿಕೃತವಾಗಿ ಗೈರು ಹಾಜರಾಗಿರುವ ಸರಕಾರಿ ನೌಕರರ ಮೇಲೆ ಇಲಾಖಾ ವಿಚಾರಣೆ ನಡೆಸಿ ಅಂಥವರನ್ನು ಕೆಲಸದಿಂದ ತೆಗೆದುಹಾಕುವ ಅಥವಾ ವಜಾ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ಅನುಸರಿಸಬೇಕಾದ ಕ್ರಮವನ್ನು ಕರ್ನಾಟಕದ ಸರಕಾರದ ಸುತ್ತೋಲೆ ಸಂಖ್ಯೆ ಡಿ ಪಿ ಎ ಆರ್ 30 ಎಸ್ ಎಸ್ ಆರ್ 79 ದಿನಾಂಕ 17.4.1979ರಲ್ಲಿ ಸ್ಪಷ್ಟಪಡಿಸಲಾಗಿದೆ.
ದಿನಾಂಕ 31.1.1989ರ ಅಧಿಕೃತ ಜ್ಞಾಪನ ಸಂಖ್ಯೆ ಸಿಆಸುಇ 4 ಸೇಇವಿ 99 ರ ಪ್ರಕಾರ ಅನಧಿಕೃತ ಗೈರುಹಾಜರಾಗಿರುವ ಸರಕಾರಿ ನೌಕರರನು ತಾನು ಅನಧಿಕೃತ ಗೈರುಹಾಜರಾದ ಕಾರಣ ಮೊದಲು ಹೊಂದಿದ ಹುದ್ದೆಯನ್ನು ಕಳೆದುಕೊಳ್ಳುವುದಿಲ್ಲ. ಆದುದರಿಂದ ಅನಧಿಕೃತ ಗೈರಹಾಜರಿಯ ಸಮಯದಲ್ಲಿ ಅಂಥವನ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಿ ಕೆಲಸದಿಂದ ತೆಗೆದು ಹಾಕದೆ ಇದ್ದ ಪಕ್ಷದಲ್ಲಿ ಅಂತಹ ಗೈರುಹಾಜರಿಯ ಅವಧಿ ಎಷ್ಟೇ ಆಗಿರಲಿ ಅವನು ವಾಪಸ್ ಕರ್ತವ್ಯಕ್ಕೆ ಹಾಜರಾದರೆ ಅಂಥವನನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
ಹೀಗೆ ಕೆಲಸಕ್ಕೆ ತೆಗೆದುಕೊಂಡ ನಂತರ ಅವಶ್ಯವೆನಿಸಿದ್ದಲ್ಲಿ ಅಧಿಕೃತ ಜ್ಞಾಪನ ಸಂಖ್ಯೆ ಡಿ ಪಿ ಎ ಆರ್ 13 ಎಸ್ ಡಿ ಇ 85 ದಿನಾಂಕ 3.7.1985 ರಲ್ಲಿರುವ ಸೂಚನೆಗಳ ಪ್ರಕಾರ ಅಂತಹ ನೌಕರರನ್ನು ಅಮಾನತ್ತಿನಲ್ಲಿ ಇಟ್ಟು ಇಲಾಖಾ ವಿಚಾರಣೆಯನ್ನು ನಡೆಸಬಹುದು ಅಥವಾ ಅಮಾನತಿನಲ್ಲಿ ಇಡದೆ ಇಲಾಖಾ ವಿಚಾರಣೆ ನಡೆಸಿ ಸೂಕ್ತ ದಂಡನೆ ವಿಧಿಸಬಹುದು ಎಂಬುದಾಗಿ ತಿಳಿಸಲಾಗಿದೆ.
ಶ್ರೀ ಎನ್.ಎಸ್.ಕಾಂತರಾಜು ಅವರ ಪ್ರಕರಣದಲ್ಲಿ ಮೇಲ್ಕಾಣಿಸಿದ ಸರಕಾರಿ ಆದೇಶದಲ್ಲಿನ ಸೂಚನೆಗಳನ್ನು ಶಿಸ್ತುಪಾಲನಾಧಿಕಾರಿಗಳು ಪಾಲಿಸದೆ ಇದ್ದುದರಿಂದ ತಪ್ಪಿತಸ್ಥ ನೌಕರನು ತಾನು ಕರ್ತವ್ಯ ನಿರ್ವಹಿಸದ ಅವಧಿಯ ವೇತನ ಮತ್ತು ಭತ್ಯೆಗಳನ್ನು ಪಡೆಯುವಂತಾಯಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ