ಕಣ್ಣೀರು ಹಾಕಿ, ಕೈಮುಗಿದು ಪ್ರಾರ್ಥಿಸಲು ನ್ಯಾಯಾಧೀಶರೇನೂ ದೇವರಲ್ಲ: ಹೈಕೋರ್ಟ್ ಹಾಗೆ ಹೇಳಲು ಕಾರಣವೇನು..?
ಕಣ್ಣೀರು ಹಾಕಿ, ಕೈಮುಗಿದು ಪ್ರಾರ್ಥಿಸಲು ನ್ಯಾಯಾಧೀಶರೇನೂ ದೇವರಲ್ಲ: ಹೈಕೋರ್ಟ್ ಹಾಗೆ ಹೇಳಲು ಕಾರಣವೇನು..?
ನ್ಯಾಯಮೂರ್ತಿಗಳೇನೂ ದೇವರಲ್ಲ. ಅವರ ಎದುರು ಕಣ್ಣೀರು ಹಾಕಿ ಕೈಮುಗಿದು ಪ್ರಾರ್ಥಿಸಬೇಕಿಲ್ಲ. ಅವರು ಕೇವಲ ತಮಗೆ ವಹಿಸಲಾದ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ನ್ಯಾ. ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ದಾವೆದಾರರೊಬ್ಬರು ಕೈಮುಗಿದು ಕಣ್ಣೀರು ಹಾಕಿ ವಾದಿಸಿದ್ದನ್ನು ಉಲ್ಲೇಖಿಸಿ ನ್ಯಾಯಪೀಠ ಈ ಅಭಿಪ್ರಾಯ ತಿಳಿಸಿತು.
ಕಾನೂನು ನ್ಯಾಯಾಲಯವು ನ್ಯಾಯದೇಗುಲ ಎಂದೇ ಪ್ರಚಲಿತವಾಗಿದೆ. ವಕೀಲರಿಂದ ಹಾಗೂ ಕಕ್ಷಿದಾರರಿಂದ ನ್ಯಾಯಾಲಯ ವಿಧೇಯತೆಯನ್ನು ಬಯಸುತ್ತಿದೆ. ಆದರೆ, ನ್ಯಾಯಪೀಠದಲ್ಲಿ ಯಾವುದೇ ದೇವರುಗಳು ಕುಳಿತಿಲ್ಲ. ನ್ಯಾಯದಾನದ ವ್ಯವಸ್ಥೆಯಲ್ಲಿ ಕಕ್ಷಿದಾರರು ಮತ್ತು ವಕೀಲರು ಘನತೆಯನ್ನು ಕಾಯ್ದುಕೊಂಡರೆ ಅಷ್ಟೇ ಸಾಕು ಎಂದು ನ್ಯಾಯಪೀಠ ಹೇಳಿತು.
ಕಾನೂನಿನ ಅಡಿಯಲ್ಲಿ ನ್ಯಾಯಾಲಯದ ಮುಂದೆ ವಾದಿಸುವುದು ಸಂವಿಧಾನಿಕ ಹಕ್ಕಾಗಿರುತ್ತದೆ. ಅದಕ್ಕಾಗಿ ಯಾವುದೇ ದಾವೇದಾರರು ಮತ್ತು ವಕೀಲರು ಕೈಮುಗಿದು ಪ್ರಾರ್ಥಿಸಬೇಕಾಗಿಲ್ಲ ಎಂದು ಹೇಳಿದರು.
ಅಳಪ್ಪುಳ ಉತ್ತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಅವರನ್ನು ಪದೇ ಪದೇ ಕರೆ ಮಾಡಿ ನಿಂದಿಸಿ ಆರೋಪ ಹೊತ್ತಿರುವ ರಮ್ಲಾ ಕಬೀರ್ ಅವರು ಸ್ವತಃ ತಮ್ಮ ಪ್ರಕರಣವನ್ನು ತಾವೇ ವಾದಿಸಿದರು. ಆ ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿ, ಕೈ ಮುಗಿದು ಪ್ರಾರ್ಥಿಸಿಕೊಂಡ ಸಂದರ್ಭದಲ್ಲಿ ನ್ಯಾಯಪೀಠ ಈ ಮೇಲಿನಂತೆ ತನ್ನ ಅಭಿಪ್ರಾಯ ಹೇಳಿತು. ಮಾತ್ರವಲ್ಲದೆ, ಸರ್ಕಲ್ ಇನ್ಸ್‌ಪೆಕ್ಟರ್ ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶ ನೀಡಿತು.
ಪ್ರಕರಣ: ರಮ್ಲಾ ಕಬೀರ್ Vs ಕೇರಳ ರಾಜ್ಯ