ವೈದ್ಯಕೀಯ ನಿರ್ಲಕ್ಷ್ಯ: ಗರ್ಭಿಣಿ ಸಾವಿಗೆ ಕಾರಣರಾದ ವೈದ್ಯರಿಗೆ 11 ಲಕ್ಷ ರೂ. ದಂಡ!
ವೈದ್ಯಕೀಯ ನಿರ್ಲಕ್ಷ್ಯ: ಗರ್ಭಿಣಿ ಸಾವಿಗೆ ಕಾರಣರಾದ ವೈದ್ಯರಿಗೆ 11 ಲಕ್ಷ ರೂ. ದಂಡ!
ಕರ್ತವ್ಯ ಲೋಪ ಹಾಗೂ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯರೊಬ್ಬರಿಗೆ ಜಿಲ್ಲಾ ಗ್ರಾಹಕ ನ್ಯಾಯಾಲಯವು 11 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಕಲೇಶಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪುರುಷೋತ್ತಮ್ ಅವರು ದಂಡಕ್ಕೆ ಒಳಗಾದ ವೈದ್ಯರಾಗಿದ್ದಾರೆ.
ಸಕಲೇಶಪುರ ತಾಲೂಕಿನ ಆನೇಮಹಲ್ ಗ್ರಾಮದ ಎಚ್.ಎಂ. ಮೋಹನ್ ಕುಮಾಋ್ ಅವರು ತಮ್ಮ ಪತ್ನಿ ವಿ.ಎಂ. ಆಶಾರವನ್ನು ಹೆರಿಗೆ ಪೂರ್ವ ತಪಾಸಣೆಗಾಗಿ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಕರೆತಂದಿದ್ದರು.
ಆಶಾ ಅವರನ್ನು ಡಾ. ಪುರುಷೋತ್ತಮ ಅವರು ಸ್ಕ್ಯಾನ್ ಮಾಡಿ ವರದಿ ಪರೀಕ್ಷಿಸಿ ಮಗು ಹೊಟ್ಟೆಯಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು. ತಕ್ಷಣ ಗರ್ಭಪಾತ ಶಸ್ತ್ರಚಿಕಿತ್ಸೆ ಮಾಡುವಂತೆ ಮೋಹನ್ ಕುಮಾರ್ ಅವರು ವಿನಂತಿಸಿಕೊಂಡರೂ ವೈದ್ಯರು ಕೋರಿಕೆಯನ್ನು ತಿರಸ್ಕರಿಸಿದ್ದರು ಎಂದು ದೂರಲಾಗಿತ್ತು.
ಈ ಹಿನ್ನೆಲೆಯಲ್ಲಿ ಆಶಾ ಅವರು ಅದೇ ದಿನ ಹೊಟ್ಟೆನೋವಿನಿಂದ ನರಳಾಡಿ ಪ್ರಜ್ಞೆ ಕಳೆದುಕೊಂಡರು.
ಮರುದಿನ ಬೆಳಿಗ್ಗೆ ಡಾ. ಪುರುಷೋತ್ತಮ ಅವರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದರು. ಆಸ್ಪತ್ರೆಯಲ್ಲಿ ಆಶಾ ಗರ್ಭಪಾತವಾಗಿ, ವಿಪರೀತ ರಕ್ತಸ್ರಾವದಿಂದ 29-03-2021ರಂದು ಮೃತಪಟ್ಟರು.
ಆಶಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಮೋಹನ್ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ವೇದಿಕೆ ಅಧ್ಯಕ್ಷರಾದ ಸಿ.ಎಂ. ಚಂಚಲ, ಸದಸ್ಯರಾದ ಎಚ್.ವಿ. ಮಹಾದೇವ ಮತ್ತು ಆರ್. ಅನುಪಮಾ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ 10 ಲಕ್ಷ ರೂ.ದಂಡ ಹಾಗೂ ಅದರ ಮೇಲೆ ಪ್ರಕರಣ ದಾಖಲಾದ ದಿನದಿಂದ ಶೇ. 9ರಂತೆ ಬಡ್ಡಿ ಸೇರಿಸಿ ಆರು ವಾರಗಳ ಒಳಗೆ ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದೆ.
ಇದರ ಜೊತೆಗೆ ಪ್ರಕರಣದ ಖರ್ಚುವೆಚ್ಚವಾಗಿ ಒಂದು ಲಕ್ಷ ರೂ. ಪಾವತಿಸಲು ನ್ಯಾಯಪೀಠ ಆದೇಶಿಸಿದೆ. ಅದೇ ರೀತಿ, ವೈದ್ಯಕೀಯ ವರದಿಯನ್ನು ಕೆಟ್ಟ ಬರವಣಿಗೆಯಲ್ಲಿ ನಮೂದಿಸಿದ ಕಾರಣ 50 ಸಾವಿರ ರೂ. ಹೆಚ್ಚುವರಿ ದಂಡ ವಿಧಿಸಿ ನ್ಯಾಯಪೀಠ ಆದೇಶ ಹೊರಡಿಸಿದೆ.