NI Act: ಈ ಮೂರು ಹಂತ ಯಶಸ್ವಿಯಾಗಿ ನಿಭಾಯಿಸಿದರೆ ಚೆಕ್ ಕೇಸು ಗೆಲುವು ನಿಶ್ಚಿತ- ಹೈಕೋರ್ಟ್
NI Act: ಈ ಮೂರು ಹಂತ ಯಶಸ್ವಿಯಾಗಿ ನಿಭಾಯಿಸಿದರೆ ಚೆಕ್ ಕೇಸು ಗೆಲುವು ನಿಶ್ಚಿತ- ಹೈಕೋರ್ಟ್
ಚೆಕ್ ಕೇಸುಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪುಗಳು ಬಹುತೇಕ ದೂರುದಾರರ ಪರವಾಗಿ ಬಂದಿದ್ದು, ಆರೋಪಿ ಫಜೀತಿಗೆ ಸಿಲುಕುವುದು ಗ್ಯಾರಂಟಿ.
ಆದರೆ, ಚೆಕ್ ಕೇಸುಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ಕರ್ನಾಟಕ ಹೈಕೋರ್ಟ್ ಪಟ್ಟಿ ಮಾಡಿದೆ. ಈ ಮೂರು ಹಂತಗಳಲ್ಲಿ ಆರೋಪಿ ಪರವಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಈ ಮೂರು ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸಿದರೆ ಚೆಕ್ ಕೇಸು ಗೆಲುವು ನಿಶ್ಚಿತ ಎಂದು ಎಸ್. ರಾಚಯ್ಯ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಆ ಪ್ರಮುಖ ಹಂತಗಳು ಏನೆಂದರೆ,
1) ಚೆಕ್ ಅಮಾನ್ಯಗೊಂಡ ಬಳಿಕ ಕಾನೂನು ಪ್ರಕಾರ ನೀಡಲಾಗುವ ಡಿಮ್ಯಾಂಡ್ ನೋಟೀಸ್‌ಗೆ ಪ್ರತ್ಯುತ್ತರ ನೀಡುವುದು
2) ದೂರುದಾರರ ಪರ ಹಾಜರುಪಡಿಸುವ ಸಾಕ್ಷಿಯನ್ನು ಪಾಟೀ ಸವಾಲಿಗೆ ಒಳಪಡಿಸುವುದು
3) ಆರೋಪಿ ಪರವಾಗಿ ದಾಖಲೆಯನ್ನು ಹಾಜರುಪಡಿಸುವುದು ಮತ್ತು ಸಾಕ್ಷ್ಯವನ್ನು ದಾಖಲೀಕರಿಸುವುದು
ದೂರುದಾರರ ಪರವಾಗಿ ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881ರ ಸೆಕ್ಷನ್ 139 ಅಡಿಯಲ್ಲಿ ಪೂರ್ವಭಾವನೆ ಇರುತ್ತದೆ. ಇಲ್ಲಿ ಪ್ರಕರಣವನ್ನು ಕಾನೂನುರೀತ್ಯಾ ವಿಫಲಗೊಳಿಸುವುದು (Disprove) ಆರೋಪಿಯ ಹೊಣೆಗಾರಿಕೆಯಾಗಿರುತ್ತದೆ.
ದೂರುದಾರರು ಸಲ್ಲಿಸಿದ ದೂರನ್ನು ಸಮರ್ಪಕವಾಗಿ ಅಲ್ಲಗಳೆದರೆ ಆಗ ಪ್ರಕರಣವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಯಿಂದ ದೂರುದಾರರಿಗೆ ವರ್ಗಾವಣೆಯಾಗುತ್ತದೆ ಎಂಬುದನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಒತ್ತಿ ಹೇಳಿದೆ.
ಇದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ "ಬಸಲಿಂಗಪ್ಪ Vs ಮುದಿಬಸಪ್ಪ" ಪ್ರಕರಣದಲ್ಲಿ 2019ರಲ್ಲಿ ನೀಡಿದ್ದ ಮಹತ್ವದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಈ ಮೂರು ಹಂತಗಳನ್ನು ಆರೋಪಿ ಪರ ವಕೀಲರು ಮೆಟ್ಟಿ ನಿಂತರೆ ಚೆಕ್ ಅಮಾನ್ಯ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಸದ್ರಿ ಪ್ರಕರಣದಲ್ಲಿ ಆರೋಪಿಗೆ ವಿಚಾರಣಾ ನ್ಯಾಯಾಲಯ ಅಪರಾಧಿ ಎಂದು ಶಿಕ್ಷೆ ನೀಡಿದ್ದರೆ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ದೂರುದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಬಳಿಕ ಹೈಕೋರ್ಟ್ ಏಕಸದಸ್ಯ ಪೀಠವೂ ಮೇಲ್ಮನವಿಯನ್ನು ವಜಾಗೊಳಿಸಿದ್ದು, ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಿತು.
ಪ್ರಕರಣ: ಪವಿತ್ರ Vs ಶೀಲಾ
ಕರ್ನಾಟಕ ಹೈಕೋರ್ಟ್, CrlA 439/2018 Dated-09-10-2023