ಅನ್ಯ ವ್ಯಕ್ತಿಯ ಮೊಬೈಲ್ ಮಾಹಿತಿ ಕೇಳಲಾಗದು- ಅದು ಖಾಸಗಿತನಕ್ಕೆ ಧಕ್ಕೆ ತಂದಂತೆ: ಹೈಕೋರ್ಟ್
ಅನ್ಯ ವ್ಯಕ್ತಿಯ ಮೊಬೈಲ್ ಮಾಹಿತಿ ಕೇಳಲಾಗದು- ಅದು ಖಾಸಗಿತನಕ್ಕೆ ಧಕ್ಕೆ ತಂದಂತೆ: ಹೈಕೋರ್ಟ್
ದಾಂಪತ್ಯದ ಅನುಮಾನ ಸಾಬೀತುಪಡಿಸಲು ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಅಥವಾ ಎಸ್‌ಎಂಎಸ್ ಯಾ ಕರೆಗಳ ಮಾಹಿತಿ ಕೇಳುವುದು ಅವರ ಖಾಸಗಿತನಕ್ಕೆ ಭಂಗ ತಂದ ಹಾಗೆ. ಹಾಗಾಗಿ, ಮೂರನೇ ವ್ಯಕ್ತಿಯ ಮೊಬೈಲ್ ವಿವರ ಕೇಳಲಾಗದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯ ಅನುಮಾನ ಸಾಬೀತುಪಡಿಸಲು ಪತ್ನಿಯ ಪ್ರಿಯಕರನೆಂದು ಆರೋಪಿಸಲಾದ ವ್ಯಕ್ತಿಯ ಮೊಬೈಲ್ ಟವರ್ ಮಾಹಿತಿ ಮತ್ತು ಆತನ ಮೊಬೈಲ್ ಎಸ್‌ಎಂಎಸ್ ಮತ್ತು ಕರೆಗಳ ಮಾಹಿತಿ ನೀಡುವಂತೆ ಕೋರಿ ಮೊಬೈಲ್ ನೆಟ್‌ವರ್ಕ್ ಕಂಪೆನಿಗೆ ನಿರ್ದೇಶಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನ್ಯಾಯಪೀಠ ರದ್ದುಪಡಿಸಿದೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದ್ದು, ಸಂವಿಧಾನದ ಪರಿಚ್ಛೇದ 21ರಡಿ ಪ್ರತಿಯೊಬ್ಬ ನಾಗರಿಕರಿಗೂ ಜೀವಿಸುವ ಮತ್ತು ಸ್ವಾತಂತ್ಯದ ಹಕ್ಕಿದೆ ಎಂಬುದನ್ನು ನೆನಪಿಸಿದೆ.
ಕೌಟುಂಬಿಕ ವಿಚಾರದಲ್ಲಿ ಮೂರನೇ ವ್ಯಕ್ತಿಯ ವಿವರ ನೀಡುವಂತೆ ಆದೇಶಿಸುವ ಮೂಲಕ ಆ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ವ್ಯಾಜ್ಯದ ಪಕ್ಷಕಾರರಲ್ಲದ ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಪ್ರಕರಣದ ವಿವರ
ದಂಪತಿ ನಡುವೆ ಕೌಟುಂಬಿಕ ಕಲಹ ಉಂಟಾಗಿ ಅವರು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ದಾವೆಗಳನ್ನು ಹೂಡಿದ್ದರು. ಪತ್ನಿಗೆ ಮೂರನೇ ವ್ಯಕ್ತಿಯ ಜೊತೆಗೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ ಪತಿ, ಪತ್ನಿಯ ಜೊತೆಗೆ ಸಂಬಂಧ ಇದೆ ಎಂದು ಆರೋಪಿಸಲಾದ ಆ ವ್ಯಕ್ತಿಯ ಮೊಬೈಲ್ ಕರೆಗಳು ಮತ್ತು ಟವರ್ ವಿವರಗಳನ್ನು ನೀಡುವಂತೆ ಮೊಬೈಲ್ ಕಂಪೆನಿಗೆ ನಿರ್ದೇಶಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕೌಟುಂಬಿಕ ನ್ಯಾಯಾಲಯ, ಪತಿಯ ಅರ್ಜಿಯನ್ನು ಪುರಸ್ಕರಿಸಿ ಮೊಬೈಲ್ ಕಂಪೆನಿಗೆ ಮೂರನೇ ವ್ಯಕ್ತಿಯ ಮಾಹಿತಿ ನೀಡುವಂತೆ ನಿರ್ದೇಶನ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಬಾಧಿತ ಮೂರನೇ ವ್ಯಕ್ತಿ, ತಾನು ಈ ಕೇಸಿನಲ್ಲಿ ಪ್ರತಿವಾದಿಯಲ್ಲ. ಮೇಲಾಗಿ ಮೊಬೈಲ್ ಟವರ್ ಮಾಹಿತಿಯಿಂದ ತನ್ನ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.
..