ಉದ್ಯೋಗ ಕಳೆದುಕೊಂಡಿದ್ದರೂ ಪತ್ನಿಗೆ ಜೀವನಾಂಶ ಕೊಡಲೇಬೇಕು- ಹೈಕೋರ್ಟ್
ಉದ್ಯೋಗ ಕಳೆದುಕೊಂಡಿದ್ದರೂ ಪತ್ನಿಗೆ ಜೀವನಾಂಶ ಕೊಡಲೇಬೇಕು- ಹೈಕೋರ್ಟ್
ಪತಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಪತ್ನಿಗೆ ಜೀವಾಂಶ ಕೊಡಲೇಬೇಕು. ಇದು ಪತಿಯ ಜವಾಬ್ದಾರಿ. ಇದನ್ನು ನ್ಯಾಯಾಲಯ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ನಾಗಪ್ರಸನ್ನ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಎದುರುದಾರರಾದ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಈ ಆದೇಶ ಹೊರಡಿಸಿದೆ.
ಪತಿಗೆ ದುಡಿಯುವ ಶಕ್ತಿ ಇದೆ. ಆತ ಉದ್ಯೋಗ ಮಾಡಿ ತನ್ನ ಪತ್ನಿಯನ್ನು ನೋಡಿಕೊಳ್ಳಬೇಕಾಗಿದೆ. ಈ ವಿಚಾರದಲ್ಲಿ ಸುಪ್ರೀಮ ಕೋರ್ಟ್ "ಅಂಜು ಗಾರ್ಗ್ Vs ದೀಪಕ್ ಕುಮಾರ್ ಗಾರ್ಗ್" ಪ್ರಕರಣದಲ್ಲಿ ನೀಡಿದ್ದ ತೀರ್ಪು ಉಲ್ಲೇಖನೀಯ ಎಂದು ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಪತಿ ಉದ್ಯೋಗ ಕಳೆದುಕೊಂಡಿದ್ದಾರೆ. ಸದ್ಯ ಜೀವನಾಂಶ ಪಾವತಿಸುವ ಪರಿಸ್ಥಿತಿಯಲ್ಲಿ ಇಲ್ಲ. ಕೌಟುಂಬಿಕ ನ್ಯಾಯಾಲಯವು ಪತಿಗೆ ರೂ. 50000/- ಆದಾಯ ಇದೆ ಎಂಬ ಅಂಶವನ್ನು ಪರಿಗಣಿಸಿ ಈ ತೀರ್ಪು ನೀಡಿತ್ತು. ಹಾಗಾಗಿ, ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ಪತ್ನಿಗೆ ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ತೀರ್ಪು ಸರಿಯಾಗಿಯೇ ಇದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ಸದ್ರಿ ಪ್ರಕರಣದ ಪತಿ ಮತ್ತು ಪತ್ನಿ 2020ರಲ್ಲಿ ಮದುವೆಯಾಗಿದ್ದರು. ಆದರೆ, ಭಿನ್ನಾಭಿಪ್ರಾಯದಿಂದಾಗಿ ಬೇರ್ಪಟ್ಟಿದ್ದರು. ಇಬ್ಬರೂ ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅನ್ವಯ ಪತ್ನಿ ಪರಿತ್ಯಕ್ತ ಪತ್ನಿಯಿಂದ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪೂರಕವಾಗಿ ಪತಿಯ ಆಸ್ತಿಯ ವಿವರಗಳನ್ನೂ ಅವರು ನ್ಯಾಯಾಲಯಕ್ಕೆ ಒದಗಿಸಿದ್ದರು.
ಅದನ್ನು ಆಧರಿಸಿ ಮಾನ್ಯ ಕೌಟುಂಬಿಕ ನ್ಯಾಯಾಲಯ, ಆಸ್ತಿ ಮತ್ತು ಸಾಲಗಳ ವಿವರಗಳನ್ನು ಪರಿಶೀಲಿಸಿ ಪತಿ ತನ್ನ ವಿಚ್ಚೇದಿತ ಪತ್ನಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಚ್ಚೇದಿತ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.