ಜಡ್ಜ್ ಮುಖ್ಯ ಪರೀಕ್ಷೆ- ಅಭ್ಯರ್ಥಿ ಬಳಿಗೆ ಪರೀಕ್ಷಾ ಕೇಂದ್ರ: ಇತಿಹಾಸ ಬರೆದ ಕರ್ನಾಟಕ ಹೈಕೋರ್ಟ್
ಜಡ್ಜ್ ಮುಖ್ಯ ಪರೀಕ್ಷೆ- ಅಭ್ಯರ್ಥಿ ಬಳಿಗೆ ಪರೀಕ್ಷಾ ಕೇಂದ್ರ: ಇತಿಹಾಸ ಬರೆದ ಕರ್ನಾಟಕ ಹೈಕೋರ್ಟ್
ಎಂಟೂವರೆ ತಿಂಗಳ ತುಂಬು ಗರ್ಭಿಣಿ ಜಡ್ಜ್ ನೇಮಕಾತಿ ಕುರಿತ ಮುಖ್ಯ ಪರೀಕ್ಷೆಗೆ ಬರೆಯಲು ಅಭ್ಯರ್ಥಿಯ ಬಳಿಗೆ ಪರೀಕ್ಷಾ ಕೇಂದ್ರವನ್ನು ಕಳುಹಿಸುವ ಮೂಲಕ ಕರ್ನಾಟಕ ಹೈಕೋರ್ಟ್ ಮಾನವೀಯತೆ ಮೆರೆದಿದೆ.
ವಕೀಲರಾದ ಮಂಗಳೂರಿನ ನೇತ್ರಾವತಿ ಸಿವಿಲ್ ಜಡ್ಜ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಮುಖ್ಯ ಪರೀಕ್ಷೆ ಬರೆಯಲು ಅವರು ಸಿದ್ಧತೆ ನಡೆಸಿದ್ದರು.
ಈಗ ನೇತ್ರಾವತಿ ತುಂಬು ಗರ್ಭವತಿ. ಈ ಕಾರಣದಿಂದ ಸಿವಿಲ್ ಜಡ್ಜ್ ಮುಖ್ಯ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಅಸಾಧ್ಯವಾಗಿತ್ತು. ಈ ಬಗ್ಗೆ ಮುಖ್ಯ ಪರೀಕ್ಷೆ ಬರೆಯಲು ಇರುವ ಸಂಕಷ್ಟದ ಬಗ್ಗೆ ನೇತ್ರಾವತಿ ಹೈಕೋರ್ಟ್‌ಗೆ ವಿವರಿಸಿದ್ದರು.
ಅಭ್ಯರ್ಥಿಯ ಸಂಕಷ್ಟಕ್ಕೆ ಸ್ಪಂದಿಸಿದ ಹೈಕೋರ್ಟ್, ಅವರ ಬಳಿಗೆ ಪರೀಕ್ಷಾ ಕೇಂದ್ರವನ್ನು ಕಳುಹಿಸಿ ತುಂಬು ಗರ್ಭಿಣಿಯ ಜಡ್ಜ್ ಕನಸಿಗೆ ನೀರೆದಿದೆ.
ನೇತ್ರಾವತಿ ಅವರಿಗೆ ಪರೀಕ್ಷೆ ಬರೆಯಲು ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಅಗತ್ಯ ಸೌಕರ್ಯ ಕಲ್ಪಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಗರ್ಭಿಣಿ ಆರೋಗ್ಯದಲ್ಲಿ ವ್ಯತ್ತಾಸ ಕಂಡುಬಂದರೆ ತಕ್ಷಣ ಸೂಕ್ತ ಚಿಕಿತ್ಸೆಗೆ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧವಿರಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ನಿರ್ದೇಶಿಸಿರುವ ಹೈಕೋರ್ಟ್, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿ ಬೆಂಗಳೂರಿನ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನಿಯೋಜಿಸಿದೆ.