ಮುಖ್ಯ ನ್ಯಾಯಮೂರ್ತಿಗಳ ಹೆಸರಲ್ಲಿ ನಕಲಿ ವಾಟ್ಸ್ಯಾಪ್ ಖಾತೆ: ಪ್ರಕರಣ ಗಂಭೀರ ಎಂದ ಸುಪ್ರೀಂ ಕೋರ್ಟ್
ಮುಖ್ಯ ನ್ಯಾಯಮೂರ್ತಿಗಳ ಹೆಸರಲ್ಲಿ ನಕಲಿ ವಾಟ್ಸ್ಯಾಪ್ ಖಾತೆ: ಪ್ರಕರಣ ಗಂಭೀರ ಎಂದ ಸುಪ್ರೀಂ ಕೋರ್ಟ್
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಾಟ್ಸ್ಯಾಪ್ ಖಾತೆ ನಕಲಿಯಾಗಿ ಸೃಷ್ಟಿಸಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಅನಗತ್ಯ ಪ್ರಯೋಜನ ಪಡೆಯುವ ದುರುದ್ದೇಶದಿಂದ ಹಿರಿಯ ಪೊಲೀಸ್ ಅಧಿಕಾರಿ ಆದಿತ್ಯ ಕುಮಾರ್ ಎಂಬವರು ಆಗಿನ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ಹೆಸರಿನಲ್ಲಿ ನಕಲಿ ವಾಟ್ಸ್ಯಾಪ್ ಖಾತೆ ಸೃಷ್ಟಿಸಿದ್ದರು.
ಈ ಪ್ರಕರಣದಲ್ಲಿ ಇಬ್ಬರು ನ್ಯಾಯಾಂಗ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ತಮಗೆ ಬೇಕಾದ ತೀರ್ಪು ಪಡೆಯಲು ಮತ್ತು ನಿರ್ದಿಷ್ಟ ನ್ಯಾಯಮೂರ್ತಿಗಳ ಕೋರ್ಟ್‌ನಲ್ಲಿ ಪ್ರಕರಣ ಲಿಸ್ಟ್ ಮಾಡಲು ಈ ಖಾತೆ ಸೃಷ್ಟಿ ಮಾಡಲಾಗಿತ್ತು.
ಈ ಪ್ರಕರಣ ಅತ್ಯಂತ ಗಂಭೀರವಾದದ್ದು ಎಂದ ನ್ಯಾಯಪೀಠ, ಆದಿತ್ಯ ಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳಬೇಕು ಮತ್ತು ಜನರು ನ್ಯಾಯಾಂಗ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಹುಸಿ ಮಾಡಬಾರದು ಎಂದು ತಿಳಿಸಿದ ನ್ಯಾಯಪೀಠ, ಇಬ್ಬರು ನ್ಯಾಯಾಧೀಶರ ವಿರುದ್ಧದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿದ್ದ ಪೀಠಕ್ಕೆ ವರ್ಗಾಯಿಸಿತ್ತು. ಇದೀಗ ಅವರಿಬ್ಬರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಪಟ್ನಾ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.