ನ್ಯಾಯಮೂರ್ತಿ ವಿ. ಗೋಪಾಲಗೌಡರ ಮುಕುಟಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ನ್ಯಾಯಮೂರ್ತಿ ವಿ. ಗೋಪಾಲಗೌಡರ ಮುಕುಟಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ಹಲವು ಪ್ರಮುಖ ತೀರ್ಪುಗಳ ಮೂಲಕ ನ್ಯಾಯಾಂಗದಲ್ಲಿ ಮಾನವೀಯ ಸಂಚಲನಕ್ಕೆ ಕಾರಣರಾದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.
ದೇಶದ ನ್ಯಾಯಾಂಗ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಅವರಿಗೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಚಿಂತಾಮಣಿ ತಾಲೂಕಿನ ಪೆದ್ದೂರಿನಲ್ಲಿ 06.10.1951ರಂದು ಜನಿಸಿದ ನ್ಯಾ. ಗೋಪಾಲಗೌಡರು ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದರು. 1975ರಲ್ಲಿ ಬೆಂಗಳೂರಿನ ಎಸ್‌ಜೆಎಂ ಕಾನೂನು ವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು.
14.11.1975ರಂದು ಗೋಪಾಲಗೌಡರು ವಕೀಲರಾಗಿ ನೋಂದಣಿ ಮಾಡಿದರು. ಕೆ. ಸುಬ್ಬರಾವ್ ಮತ್ತು ಸಿಎಸ್ ರೆಡ್ಡಿ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. 1979ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿ ಸ್ವತಂತ್ರವಾಗಿ ವೃತ್ತಿ ಜೀವನ ಆರಂಭಿಸಿದರು.
11-6-1997ರಂದು ಮಾನ್ಯ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾಯಮೂರ್ತಿ ಗೋಪಾಲಗೌಡರು 3-6-1999ರಂದು ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
23-06-2006ರಿಂದ 23-3-2010ರವರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ 07-01-2009 ರಿಂದ 6-1-2011ರವರೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದರು.
2010ರಲ್ಲಿ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 24.12.2012ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಹೊಂದಿದರು. 2016ರ ವರೆಗೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.
ವಕೀಲರಾಗಿ ಜನಸೇವೆ
ತಮ್ಮ ವಕೀಲ ವೃತ್ತಿಯ ಬದುಕಿನಲ್ಲಿ ಬಡವರು, ಅಸಹಾಯಕರು ಮತ್ತು ಕಾರ್ಮಿಕರ ಪರವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೋರಾಟ ನಡೆಸಿದ್ದ ಗೋಪಾಗೌಡರು ತಮ್ಮ ನಿವೃತ್ತಿಯ ನಂತರವೂ ಜನಪರ ಹೋರಾಟ ಮತ್ತು ಜನಸೇವೆಯಲ್ಲಿ ಸಕ್ರಿಯರಾಗಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸುವ ಪ್ರತಿಭಟನೆ, ಹಕ್ಕೊತ್ತಾಯ ಹೋರಾಟಗಳಲ್ಲಿ ಗೋಪಾಲಗೌಡರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.