ದ್ವೇಷ ಭಾಷಣ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ದ್ವೇಷ ಭಾಷಣ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಕೊಚ್ಚಿಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಙಾನ ರಾಜ್ಯ ಸಚಿವ ರಾಜೀವ್ ಚಂದ್ರ ಶೇಖರ್ ವಿರುದ್ಧ ಕೇರಳ ಪೊಲೀಸರು ಎಫ್‌ಐಆರ್ ದಾಖಲು ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಎಫ್‌ಐಆರ್‌ನ್ನು ರದ್ದುಗೊಳಿಸಬೇಕು ಎಂದು ಕೋರಿ ರಾಜೀವ್ ಚಂದ್ರಶೇಖರ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಿ.ಎಸ್. ಡಯಾಸ್ ಅವರಿದ್ದ ನ್ಯಾಯಪೀಠ, ಡಿಸೆಂಬರ್ 14ರ ವರೆಗೆ ರಾಜೀವ್ ಚಂದ್ರಶೇಖರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಚಂದ್ರಶೇಖರ್ ಪರ ಹಿರಿಯ ವಕೀಲರಾದ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದ್ದರು.
ಕೋಮುದ್ವೇಷ ಹುಟ್ಟು ಹಾಕುವ ಉದ್ದೇಶದಿಂದ ರಾಜೀವ್ ಚಂದ್ರಶೇಖರ್ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಹೇಳಿಕೆಗಳನ್ನು ಪ್ರಕಟಿಸಿದ್ದರು ಎಂದು ಆರೋಪಿಸಲಾಗಿತ್ತು. ಕೇಂದ್ರ ಸಚಿವ ರಾಜೀವ್ ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ತರಾಟೆಗೆ ತೆಗೆದುಕೊಂಡಿದ್ದರು.
ಎರ್ನಾಕುಲಂ ಸೈಬರ್ ಕೋಶದ ಸಬ್ ಇನ್ಸ್‌ಪೆಕ್ಟರ್ ನೀಡಿದ ದೂರಿನ ಆಧಾರದಲ್ಲಿ ಅಕ್ಟೋಬರ್ 31ರಂದು ಎರ್ನಾಕುಲಂ ಕೇಂದ್ರ ಪೊಲೀಸ್ ಠಾಣೆ ರಾಜೀವ್ ಚಂದ್ರಶೇಖರ್ ವಿರುದ್ಧ ಐಪಿಸಿ ಸೆಕ್ಷನ್ 153, 153a ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120(o) ಅಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ದೂರಿ ಪ್ರಕರಣ ದಾಖಲಿಸಲಾಗಿತ್ತು.