ಪ್ರೊಬೇಷನರಿ ಅವಧಿ ಬಳಿಕ ಸೇವೆ ಮುಂದುವರಿದರೆ ನೌಕರಿ ಖಾಯಂ ಆಗುತ್ತದೆಯೇ..?- ಹೈಕೋರ್ಟ್‌ನ ಮಹತ್ವದ ತೀರ್ಪು
ಪ್ರೊಬೇಷನರಿ ಅವಧಿ ಬಳಿಕ ಸೇವೆ ಮುಂದುವರಿದರೆ ನೌಕರಿ ಖಾಯಂ ಆಗುತ್ತದೆಯೇ..?- ಹೈಕೋರ್ಟ್‌ನ ಮಹತ್ವದ ತೀರ್ಪು
ಸೇವಾ ಖಾಯಮಾತಿ ಕುರಿತು ಲಿಖಿತ ಆದೇಶವಿಲ್ಲದೆ ಪ್ರೊಬೇಶನರಿ ಅವಧಿ ಬಳಿಕ ಸೇವೆಯಲ್ಲಿ ಮುಂದುವರಿದಿರುವ ಕಾರಣಕ್ಕೆ ನೌಕರನನ್ನು ಖಾಯಂ ನೌಕರನೆಂದು ಪರಿಗಣಿಸುವಂತಿಲ್ಲ. - ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಪ್ರೊಬೇಶನರಿ ಅವಧಿಯನ್ನು ಪೂರ್ಣಗೊಳಿಸಿ ಸೇವೆಯಲ್ಲಿ ಮುಂದುವರಿಯುವ ನೌಕರನನ್ನು ಖಾಯಂ ನೌಕರನೆಂದು ಪರಿಗಣಿಸಬೇಕಾದರೆ ಆತನು ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುವ ಬಗ್ಗೆ ನೇಮಕಾತಿ ಪ್ರಾಧಿಕಾರವು ಲಿಖಿತ ಆದೇಶವನ್ನು ಹೊರಡಿಸ ತಕ್ಕದ್ದು. ಪ್ರೊಬೇಶನರಿ ಅವಧಿಯ ಬಳಿಕ ಸೇವೆಯಲ್ಲಿ ಮುಂದುವರಿದ ಕಾರಣಕ್ಕಾಗಿ ಆತನ ಸೇವೆ ಕಾಯಂ ಆಗಿದೆ ಎಂದು ಪರಿಗಣಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರೊಬೇಶನರಿ ಅವಧಿ ಕಳೆದ ಬಳಿಕ ಸೇವೆಯಲ್ಲಿ ಮುಂದುವರೆಯುವ ನೌಕರನ ಪ್ರೊಬೇಶನರಿ ಅವಧಿ ಸ್ವಯಂ ಚಾಲಿತವಾಗಿ ತೃಪ್ತಿಕರವೆಂದು ಘೋಷಿಸಲ್ಪಡುವುದಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು "ಸೌಮ್ಯ ಆರ್ Vs ಮಹಾ ವಿಲೇಖನಾಧಿಕಾರಿ ಮತ್ತಿತರರು" ಪ್ರಕರಣದಲ್ಲಿ ದಿನಾಂಕ 21.9.2023ರಂದು ಮಹತ್ವದ ತೀರ್ಪು ಘೋಷಿಸಿದೆ.
ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ. ಮಾನ್ಯ ಜಿಲ್ಲಾ ನ್ಯಾಯಾಧೀಶರು ಕೊಡಗು- ಮಡಿಕೇರಿ ಇವರು ದಿನಾಂಕ 29.08.2012 ರಂದು ನೀಡಿದ ನೇಮಕಾತಿ ಆದೇಶ ಪ್ರಕಾರ ಶೀಘ್ರಲಿಪಿಗಾರ್ತಿ ಹುದ್ದೆಗೆ ನೇಮಕಗೊಂಡ ಕು. ಸೌಮ್ಯ ಆರ್. ಎಂಬವರು ವಿರಾಜಪೇಟೆಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಸೇವೆಗೆ ಸೇರಿದರು. ಸದರಿ ನೌಕರರು ತಮ್ಮ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. ಆದರೆ ಮಾನ್ಯ ಜಿಲ್ಲಾ ನ್ಯಾಯಾಧೀಶರು ಕು. ಸೌಮ್ಯ ಆರ್ ಇವರು ಎರಡು ವರ್ಷಗಳ ಪ್ರೊಬೇಶನರಿ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವ ಬಗ್ಗೆ ಆದೇಶ ಹೊರಡಿಸಲಿಲ್ಲ. ಬದಲಿಗೆ ಪ್ರೊಬೇಶನರಿ ಅವಧಿಯನ್ನು ವಿಸ್ತರಿಸಿದರು.
ದಿನಾಂಕ 15.2.2019 ರಂದು ಮಾನ್ಯ ಜಿಲ್ಲಾ ನ್ಯಾಯಾಧೀಶರು ಕು. ಸೌಮ್ಯ ಆರ್. ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಆದೇಶ ಹೊರಡಿಸಿದರು. ಸದರಿ ಆದೇಶದಿಂದ ಬಾಧಿತರಾದ ಕು. ಸೌಮ್ಯ ಆರ್. ಅವರು ತನ್ನನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಮಾನ್ಯ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಂಖ್ಯೆ 11366/2022 ಅನ್ನು ದಾಖಲಿಸಿದರು.
ರಿಟ್ ಅರ್ಜಿದಾರರ ಪರ ಈ ಕೆಳಗಿನ ವಾದ ಮಂಡಿಸಲಾಯಿತು. ರಿಟ್ ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆಗೊಳಿಸಲಾದ ಆದೇಶದಲ್ಲಿ ಯಾವುದೇ ಕಾರಣಗಳನ್ನು ನಮೂದಿಸಿಲ್ಲ. ಅರ್ಜಿದಾರರು ಎಂಟು ವರ್ಷಗಳ ಕಾಲ ಶೀಘ್ರಲಿಪಿಗಾರ್ತಿಯಾಗಿ ಸೇವೆ ಸಲ್ಲಿಸಿದ್ದು ಅವರ ಸೇವಾ ಅನುಭವವನ್ನು ಪರಿಗಣಿಸಿಲ್ಲ. ಅರ್ಜಿದಾರರು ಶೀಘ್ರಲಿಪಿಗಾರ್ತಿ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಆದುದರಿಂದ ಪ್ರೊಬೇಶನರಿ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ ಬಗ್ಗೆ ಆದೇಶ ಹೊರಡಿಸುವ ಬದಲು ಮಾನ್ಯ ಜಿಲ್ಲಾ ನ್ಯಾಯಾಧೀಶರು ಕೊಡಗು-ಮಡಿಕೇರಿ ಇವರು ಆಕೆಯನ್ನು ಸೇವೆಯಿಂದ ಬಿಡುಗಡೆಗೊಳಿಸಿ ದಿನಾಂಕ 15.2.2019 ರಂದು ಆದೇಶ ಹೊರಡಿಸಿದ್ದಾರೆ. ಸದರಿ ಆದೇಶ ಕಾನೂನಿನಡಿ ಊರ್ಜಿತವಲ್ಲ. ಯಾವುದೇ ವಿಚಾರಣೆ ನಡೆಸದೆ ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಆದುದರಿಂದ ಸದರಿ ಆದೇಶವನ್ನು ರದ್ದು ಪಡಿಸಬೇಕೆಂದು ಅರ್ಜಿದಾರರ ಪರ ವಕೀಲರು ಮಾನ್ಯ ಹೈಕೋರ್ಟ್ ನಲ್ಲಿ ಪ್ರಾರ್ಥಿಸಿದರು.
ರಿಟ್ ಪ್ರಕರಣದ ಎದುರುದಾರರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ಪ್ರೊಬೇಶನರಿ ನಿಯಮ 1977 ರ ನಿಯಮ 6 ರ ಪ್ರಕಾರ ನೌಕರರ ಕಾರ್ಯಕ್ಷಮತೆ ಪರಿಗಣಿಸಿ ಸೇವೆಯು ಅತೃಪ್ತಿಕರ ಎಂದು ಕಂಡುಬಂದಲ್ಲಿ ನೇಮಕಾತಿ ಪ್ರಾಧಿಕಾರವು ಪರೀಕ್ಷಾರ್ಥ ಅವಧಿಯಲ್ಲಿ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಬಹುದಾಗಿದೆ. ರಿಟ್ ಅರ್ಜಿದಾರಳ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲವೆಂಬ ನಿಷ್ಕರ್ಷಗೆ ಬಂದ ನೇಮಕಾತಿ ಪ್ರಾಧಿಕಾರವು ಆಕೆಯನ್ನು ಸೇವೆಯಿಂದ ಬಿಡುಗಡೆಗೊಳಿಸುವ ಆದೇಶ ಹೊರಡಿಸಿರುವುದು ನಿಯಮಾನಸಾರ ಕ್ರಮಬದ್ಧವಾಗಿದೆ. ನೇಮಕಾತಿ ಪ್ರಾಧಿಕಾರ ದಿನಾಂಕ 23.04.2004 ರ ತನ್ನ ಆದೇಶದಲ್ಲಿ ಆಕೆಯ ಕೆಲಸ ಮತ್ತು ನಡತೆ ತೃಪ್ತಿಕರವಾಗಿಲ್ಲವೆಂಬ ಷರಾದೊಂದಿಗೆ ಆಕೆಗೆ ಮಧ್ಯಂತರ ತರಬೇತಿಯ ಅವಶ್ಯಕತೆ ಇದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿತು. ಸಾಕಷ್ಟು ಕಾಲಾವಕಾಶ ನೀಡಿದ್ದರೂ ಅರ್ಜಿದಾರರ ಕರ್ತವ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲವಾದ್ದರಿಂದ ಆಕೆಯನ್ನು ಸೇವೆಯಿಂದ ಬಿಡುಗಡೆಗೊಳಿಸಲಾಯಿತು.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಇ.ಎಸ್.ಇಂದಿರೇಶ್ ಅವರ ಏಕ ಸದಸ್ಯ ನ್ಯಾಯ ಪೀಠವು ಈ ಕೆಳಗಿನ ಕಾರಣಗಳಿಗಾಗಿ ರಿಟ್ ಅರ್ಜಿಯನ್ನು ವಜಾ ಗೊಳಿಸಿತು.
ಕರ್ತವ್ಯ ಮತ್ತು ನಡತೆ ಅತೃಪ್ತಿಕರವೆಂಬ ನೆಲೆಯಲ್ಲಿ ಪರೀಕ್ಷಾರ್ಥ ಅವಧಿಯಲ್ಲಿರುವ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವುದು ನಿಯಮಬಾಹಿರವಲ್ಲ. ಆದರೆ ದುರ್ನಡತೆ ಎಸಗಿದ ಆರೋಪವಿದ್ದಲ್ಲಿ ಕೆ.ಸಿ.ಎಸ್. (ಸಿಸಿಎ) ನಿಯಮಾನುಸಾರ ಇಲಾಖೆ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳತಕ್ಕದ್ದು. ಅರ್ಜಿದಾರರ ವಿರುದ್ಧ ದುರ್ನಡತೆಯ ಯಾವುದೇ ಆರೋಪವಿಲ್ಲ. ಆದುದರಿಂದ ಪ್ರೊಬೇಶನರಿ ನಿಯಮ 7 ರಲ್ಲಿ ವಿಧಿಸಿದಂತೆ ಇಲಾಖಾ ವಿಚಾರಣೆ ನಡೆಸುವ ಪ್ರಸಂಗ ಉದ್ಭವಿಸುವುದಿಲ್ಲ. ಆಕೆಯ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲವೆಂಬ ನೆಲೆಯಲ್ಲಿ ಪ್ರೊಬೇಶನ್ ನಿಯಮ 6 ರಡಿ ವಿಧಿಸಿದಂತೆ ಆಕೆಯನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಏಕ ಸದಸ್ಯ ನ್ಯಾಯ ಪೀಠದ ಆದೇಶದಿಂದ ಭಾದಿತರಾದ ಅರ್ಜಿದಾರರು ಸದರಿ ಆದೇಶವನ್ನು ಪ್ರಶ್ನಿಸಿ ರಿಟ್ ಅಪೀಲ್ ಸಂಖ್ಯೆ 1154/2023 ರನ್ನು ದಾಖಲಿಸಿದರು. ಸದರಿ ರಿಟ್ ಅಪೀಲ್ ನ ವಿಚಾರಣೆಯು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಪ್ರಸನ್ನ ಬಿ. ವರಾಳೆ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಇವರನ್ನೊಳಗೊಂಡ ವಿಭಾಗೀಯ ಪೀಠದ ಸಮಕ್ಷಮ ನಡೆಯಿತು. ಈ ಪ್ರಕರಣದಲ್ಲಿ ವಿಭಾಗಿಯ ಪೀಠವು ಈ ಕೆಳಗಿನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಪ್ರೊಬೇಶನರಿ ಅವಧಿಯಲ್ಲಿರುವ ನೌಕರನಿಗೆ ಖಾಯಮಾತಿ ಹೊಂದಿರುವ ನೌಕರನಿಗಿರುವ ಹಕ್ಕು ಇರುವುದಿಲ್ಲ. ನೌಕರನನ್ನು ಪ್ರೊಬೇಶನರಿ ಅವಧಿಯಲ್ಲಿ ಇರಿಸಲು ಎರಡು ಉದ್ದೇಶಗಳಿವೆ. ಸದರಿ ಪರೀಕ್ಷಾರ್ಥ ಅವಧಿಯಲ್ಲಿ ಉದ್ಯೋಗಿಯ ಕಾರ್ಯ ಕ್ಷಮತೆಯನ್ನು ಪರಿಶೀಲಿಸಲು ಉದ್ಯೋಗದಾತನಿಗೆ ಅವಕಾಶ ನೀಡುವುದು. ಹಾಗೆಯೇ ಸದರಿ ಹುದ್ದೆಗೆ ತನ್ನ ಅರ್ಹತೆಯನ್ನು ಸಾಬೀತುಪಡಿಸುವ ಅವಕಾಶವನ್ನು ಉದ್ಯೋಗಿಗೆ ನೀಡುವುದು. ಉದ್ಯೋಗದಲ್ಲಿ ಮುಂದುವರಿಯುವ ವಿಷಯದಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತನಿಗೆ ಸಮಾನ ಅವಕಾಶಗಳಿವೆ.
ಅರ್ಜಿದಾರರು ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಕಾರಣಕ್ಕೆ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತಿಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಖಾಯಮಾತಿ ಆದೇಶ ಹೊರಡಿಸಿದ ಬಳಿಕ ಪ್ರೊಬೇಶನರಿ ಅವಧಿಯಲ್ಲಿರುವ ನೌಕರರ ಹುದ್ದೆ ಕಾಯಂ ಆಗುವುದು. ಪ್ರೊಬೇಶನರಿ ಅವಧಿ ಮುಗಿದ ಬಳಿಕ ಸೇವೆಯಲ್ಲಿ ಮುಂದುವರೆಯುವುದು ಸ್ವಯಂಚಾಲಿತವಾಗಿ ಸೇವೆ ಖಾಯಂ ಆಗಿದೆ ಎಂಬುದರ ಸಂಕೇತವಲ್ಲ. ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಲಾಗಿದೆ ಎಂಬ ಲಿಖಿತ ಆದೇಶವನ್ನು ನೇಮಕಾತಿ ಪ್ರಾಧಿಕಾರ ಹೊರಡಿಸಿದ ಬಳಿಕವೇ ನೌಕರರ ಉದ್ಯೋಗ ಖಾಯಂ ಆಗುವುದು.
ಏಕ ಸದಸ್ಯ ನ್ಯಾಯಪೀಠವು ಹೊರಡಿಸಿದ ಆದೇಶದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಅಂಶ ಕಂಡುಬಾರದ ಕಾರಣ ಮಾನ್ಯ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠವು ರಿಟ್ ಅಪೀಲನ್ನು ವಜಾ ಗೊಳಿಸಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ