ಬಾರ್ ಸದಸ್ಯರ ಮೇಲೆ ಹಲ್ಲೆ, ಹತ್ಯೆ ಪ್ರಕರಣ: ವಕೀಲರ ಸಂರಕ್ಷಣಾ ಕಾಯ್ದೆಗೆ ಹೆಚ್ಚಿದ ಒತ್ತಡ, ಸಿಎಂ ನಿಲುವೇನು..?
ಬಾರ್ ಸದಸ್ಯರ ಮೇಲೆ ಹಲ್ಲೆ, ಹತ್ಯೆ ಪ್ರಕರಣ: ವಕೀಲರ ಸಂರಕ್ಷಣಾ ಕಾಯ್ದೆಗೆ ಹೆಚ್ಚಿದ ಒತ್ತಡ, ಸಿಎಂ ನಿಲುವೇನು..?
ಚಿಕ್ಕಮಗಳೂರಿನ ನ್ಯಾಯವಾದಿ ಪ್ರೀತಮ್ ಮೇಲೆ ಪೊಲೀಸರಿಂದ ನಡೆದ ಅಮಾನುಷ ಹಲ್ಲೆ ಹಾಗೂ ಕಲಬುರ್ಗಿಯಲ್ಲಿ ಹಾಡಹಗಲೇ ನಡೆದ ವಕೀಲರ ಹತ್ಯೆ ಪ್ರಕರಣದ ಬಳಿಕ ರಾಜ್ಯದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗಬೇಕು ಎಂಬ ಬಲವಾದ ಕೂಗು ಕೇಳಿಬಂದಿದೆ.
ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದಾಗ ತೋರಿದ ಬದ್ಧತೆ ಹಾಗೂ ನೀಡಿದ ವಾಗ್ದಾನ ಈಡೇರಿಸಲು ಈಗಲೂ ಸಿದ್ದರಾಗಿದ್ದರೆ ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೇ ಈ ಕಾಯ್ದೆಯನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಹಿಂದಿನ ಸರ್ಕಾರದ ಅವಧಿಯಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಅಂತಿಮ ರೂಪು ಪಡೆದು ಅಧಿವೇಶನದಲ್ಲಿ ಮಂಡನೆ ಆಗುತ್ತಿರುವಾಗಲೇ ಆಗಿನ ಕಾನೂನು ಸಚಿವರು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ಮಸೂದೆ ಜಾರಿಯಾಗಲೇ ಇಲ್ಲ.
ವಕೀಲರ ಸಮುದಾಯ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ಬೆಳಗಾವಿಗೆ ಪಾದಯಾತ್ರೆ ನಡೆಸಿದ್ದು, ಆ ಕ್ಷಣಗಳು ವಕೀಲರ ಸಮುದಾಯದಲ್ಲಿ ಹಸಿರಾಗಿದೆ. ಈ ಹೋರಾಟದ ಫಲಕ್ಕಾಗಿ ವಕೀಲರು ತೀವ್ರ ನಿರೀಕ್ಷೆಯಲ್ಲಿ ಇದ್ದಾರೆ.
ವಕೀಲರ ಸಂರಕ್ಷಣಾ ಕಾಯ್ದೆಗೆ ಅಂತಿಮ ರೂಪ ನೀಡಲಾಗುತ್ತಿದೆ. ಈಗಾಗಲೇ ಮಸೂದೆಯ ಬಗ್ಗೆ ಎಳೆ ಎಳೆಯಾಗಿ ಚರ್ಚೆ ನಡೆಸಲಾಗಿದೆ ಎಂದು ಸ್ವತಃ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಕರ್ನಾಟಕ ಹೈಕೋರ್ಟ್fಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವರೂ ಕಾಯ್ದೆ ಜಾರಿಗೊಳಿಸಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಶೀಘ್ರದಲ್ಲೇ ವಕೀಲ ಸಮುದಾಯಕ್ಕೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.