ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ: ಕೇಂದ್ರದ ನಿರ್ಧಾರಕ್ಕೆ ಸುಪ್ರೀಂ ಸಮ್ಮತಿ
ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ: ಕೇಂದ್ರದ ನಿರ್ಧಾರಕ್ಕೆ ಸುಪ್ರೀಂ ಸಮ್ಮತಿ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿರುವ 2019ರ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಸಹಮತ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್, ನ್ಯಾ. ಸಂಜೀವ್ ಖನ್ನ, ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಸೂರ್ಯಕಾಂತ್ ಅವರಿದ್ದ ಐದು ಸದಸ್ಯರ ಸಂವಿಧಾನ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಇದೇ ವೇಳೆ, ಲಡಾಖ್‌ನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಗುರುತಿಸಿದ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಜಮ್ಮು ಕಾಶ್ಮೀರಕ್ಕೆ ಸ್ವತಂತ್ರ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂಬ ಸಾಲಿಸಿಟರ್ ಜನರಲ್ ಅವರ ಭರವಸೆಯನ್ನು ಗಮನಿಸಿತು.
ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆದ ನಂತರ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಇತರ ಆಕ್ಷೇಪಾರ್ಹ ಆದೇಶ, ವಿದ್ಯಮಾನಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಲು ನಿಷ್ಪಕ್ಷಪಾತ ಸಮಿತಿಯೊಂದನ್ನು ರಚಿಸುವಂತೆ ಆದೇಶದಲ್ಲಿ ಶಿಫಾರಸ್ಸು ಮಾಡಲಾಗಿದೆ. ಇದನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ತಕ್ಷಣ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಸುಪ್ರೀಂ ಪೀಠ ಕೇಂದ್ರಕ್ಕೆ ನಿರ್ದೇಶನ ನೀಡಿದೆ.