ವಕೀಲರಿಗೇ ಹೀಗಾದರೆ ಸಾಮಾನ್ಯರ ಗತಿಯೇನು..? ಪೊಲೀಸರ ನಡೆ ಕಾನೂನಿಗೆ ಬೆದರಿಕೆ ಎಂದ ಹೈಕೋರ್ಟ್!
ವಕೀಲರಿಗೇ ಹೀಗಾದರೆ ಸಾಮಾನ್ಯರ ಗತಿಯೇನು..? ಪೊಲೀಸರ ನಡೆ ಕಾನೂನಿಗೆ ಬೆದರಿಕೆ ಎಂದ ಹೈಕೋರ್ಟ್!
ಚಿಕ್ಕಮಗಳೂರಿನ ವಕೀಲ ಪ್ರೀತಂ ಮೇಲಿನ ಪೊಲೀಸರ ಹಲ್ಲೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ವಕೀಲರಿಗೇ ಈ ರೀತಿಯ ಹಲ್ಲೆ ನಡೆದರೆ ಇನ್ನು ಜನಸಾಮಾನ್ಯರ ಗತಿಯೇನು..? ಇದೊಂದು ರೀತಿಯಲ್ಲಿ ಕಾನೂನಿಗೆ ಎದುರಾದ ಬೆದರಿಕೆಯಾಗಿದೆ ಎಂದು ನ್ಯಾಯಪೀಠ ಕಠಿಣ ಶಬ್ಧಗಳಲ್ಲಿ ಅಭಿಪ್ರಾಯಪಟ್ಟಿದೆ.
ಹಲ್ಲೆ ಘಟನೆಯನ್ನು ಸ್ವಯಂ ಪ್ರೇರಿತ ಪ್ರಕರಣವಾಗಿ ತುರ್ತು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ, ವಕೀಲರ ಮೇಲಿನ ಹಲ್ಲೆ ಒಳ್ಳೆಯ ವಿಚಾರವಲ್ಲ. ಹಲ್ಲೆಯು ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ಈ ಘಟನೆಯಿಂದ ಸಿಜೆಗೆ ಬೇಸರವಾಗಿದೆ. ಇಂತಹ ಘಟನೆಗಳು ಹಿಂದೆಲ್ಲ ಉಗಾಂಡದಲ್ಲಿ ನಡೆಯುತ್ತಿದ್ದವು. ವಕೀಲರಿಗೆ ಹೀಗಾದೆ ಇನ್ನು ಸಾಮಾನ್ಯರ ಪಾಡೇನು..? ಎಂದು ನ್ಯಾಯಪೀಠ ಈ ಘಟನೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿತು.
ಎಲ್ಲ ವಕೀಲರೂ ಶುದ್ಧರು ಎಂದು ನಾವು ಹೇಳುತ್ತಿಲ್ಲ. ಆದರೆ, ಸಾಮಾನ್ಯವಾಗಿ ವಕೀಲರು ಕಾನೂನು ಪಾಲಕರು ಎಂಬ ಭಾವನೆ ಇದೆ. ಹೆಲ್ಮಟ್ ಹಾಕದೆ ವಾಹನ ಚಾಲನೆ ಮಾಡಿದ್ದು ಸಂಚಾರಿ ನಿಯಮ ಉಲ್ಲಂಘನೆ. ಇದೊಂದು ಹೀನ ಕೃತ್ಯವಲ್ಲ. ಒಂದು ವೇಳೆ, ಹೀನ ಕೃತ್ಯವಾಗಿದ್ದರೆ ಅದನ್ನು ಹೇಗೋ ಅರ್ಥ ಮಾಡಿಕೊಳ್ಳಬಹುದಿತ್ತು ಎಂದು ಮಾರ್ಮಿಕವಾಗಿ ಪೊಲೀಸರ ಹಲ್ಲೆ ಪ್ರಕರಣ ಕುರಿತು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ನಾವೆಲ್ಲರೂ ಗೌರವಾನ್ವಿತ ಹುದ್ದೆಯಲ್ಲಿ ಇರುವವರು. ವಕೀಲರ ಅಹವಾಲು ನ್ಯಾಯಮೂರ್ತಿಗಳ ವಿರುದ್ಧವಲ್ಲ. ಹೀಗಾಗಿ ನ್ಯಾಯಧೀಶರನ್ನೇಕೆ ಅವಾಯ್ಡ್ ಮಾಡುತ್ತೀರಿ. ನಿಮಗೆ ನ್ಯಾಯಮೂರ್ತಿಗಳ ಬಗ್ಗೆ ಯಾವುದೇ ಆಕ್ಷೇಪ ಇಲ್ಲದಿರುವಾಗ ಅವರನ್ನು ದೂರ ಇಡುವುದು ಸರಿಯಲ್ಲ ಎಂದು ನ್ಯಾ. ಕೃಷ್ಣ ಎಸ್. ದೀಕ್ಷಿತ್ ವಕೀಲರ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಹೆಲ್ಮೆಟ್ ಧರಿಸುವುದು ರಸ್ತೆ ಸಂಚಾರ ನಿಯಮ ಪಾಲಿಸಲು. ತಲೆಗೆ ಏನೂ ಆಗಬಾರದು ಎಂಬ ಉದ್ದೇಶದಿಂದ. ಈಗ ಪೊಲೀಸರು ಜನರ ತಲೆ ಹೊಡೆಯುತ್ತಿರುವುದರಿಂದ ಹೆಲ್ಮೆಟ್ ಧರಿಸಬೇಕಾದ ಅಗತ್ಯವಿಲ್ಲ ಎಂದು ನ್ಯಾಯಪೀಠ ಪೊಲೀಸರ ಕ್ರೌರ್ಯವನ್ನು ಕಟುವಾಗಿ ವಿಮರ್ಶಿಸಿತು.
ದಾಳಿ ನಡೆದಿರುವುದು ಬೀದಿ ಬದಿ ವ್ಯಾಪಾರಿಗಳ ಮೇಲಲ್ಲ. ಬಾರ್ ಸದಸ್ಯರ ಮೇಲೆ ದಾಳಿ ನಡೆದಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದೆಯೇ? ಎಂಬ ಪ್ರಶ್ನೆಯನ್ನು ಸಾಮಾನ್ಯ ಜನರಲ್ಲಿ ಮೂಡಿಸಬಹುದು. ಹಾಗಾಗಿ, ನಾವು ಧರಣಿ ಮಾಡುತ್ತಿರುವವರಲ್ಲಿ ದೋಷ ಹುಡುಕಲಾಗದು ಎಂದು ವಕೀಲರ ಪ್ರತಿಭಟನೆಯ ಬಗ್ಗೆ ನ್ಯಾ. ದೀಕ್ಷಿತ್ ಹೇಳಿದರು.